Wednesday, August 29, 2012

ಪ್ರಜಾವಾಣಿ 29-8-2012 ,ಮುಖಪುಟ


ವಿಧಾನಸೌಧ ಕಚೇರಿಯ ಗೋಡೆ ಒಡೆಸಿದ ಅಧಿಕಾರಿ!:ಸಿ.ಎಂ. ಸಂಸದೀಯ ಕಾರ್ಯದರ್ಶಿ ಮುನೇಕೊಪ್ಪ


  • August 29, 2012
  • Share  
  • [-]
  • Text
  • [+]

ಬೆಂಗಳೂರು: ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ವಿಧಾನ ಸೌಧದದಲ್ಲಿ ಹಂಚಿಕೆಯಾಗಿರುವ ಎರಡು ಕೊಠಡಿಗಳ ನಡುವಿನ ಗೋಡೆಯನ್ನು ಒಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಪಾಟೀಲ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ 340- 340(ಎ) ಸಂಖ್ಯೆಯ ಕೊಠಡಿಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ 340 ಸಂಖ್ಯೆಯ ಕೊಠಡಿಯನ್ನು ಪಾಟೀಲ ಅವರು ಮತ್ತು 340(ಎ) ಕೊಠಡಿಯನ್ನು ಅವರ ಆಪ್ತ ಕಾರ್ಯದರ್ಶಿ ಬಳಸಲು ಅವಕಾಶವಿದೆ.

ಸೋಮವಾರದಿಂದ ಈ ಕೊಠಡಿಗಳ ನವೀಕರಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆ. ಮಂಗಳವಾರ ಗೋಡೆ ಒಡೆಯಲಾಗಿದೆ. ಐತಿಹಾಸಿಕ ಕಟ್ಟಡವಾದ ವಿಧಾನಸೌಧದಲ್ಲಿ ಕೊಠಡಿಗಳ ನವೀಕರಣ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಗೋಡೆಯನ್ನು ಒಡೆದಿರುವುದು ಇದೇ ಮೊದಲು. ವಾಸ್ತು ಪ್ರಕಾರ `ಖಾಸಗಿ ಛೇಂಬರ್` ನಿರ್ಮಿಸಿಕೊಳ್ಳಲು ಗೋಡೆಯನ್ನು ಕೆಡವಲಾಗಿದೆ. ನವೀಕರಣಕ್ಕಾಗಿ 15 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೊಠಡಿಗಳ ನವೀಕರಣ, ಹೊಸ ಪೀಠೋಪಕರಣಗಳ ಅಳವಡಿಕೆಗೆ ಅವಕಾಶವಿದೆ. ಗೋಡೆ ಒಡೆಯ ಬೇಕಾದರೆ ಮೊದಲೇ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಅನುಮತಿ ಇಲ್ಲದೆಯೇ ಗೋಡೆ ಒಡೆಯಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರ ಬದಲಾವಣೆಯಾಗಿ, ಹೊಸ ಮುಖ್ಯಮಂತ್ರಿ, ಸಚಿವರು ಅಧಿಕಾರಕ್ಕೆ ಬಂದಾಗ ತಮಗೆ ಹಂಚಿಕೆಯಾಗಿರುವ ಸರ್ಕಾರಿ ಬಂಗಲೆಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಾಸ್ತು ಪ್ರಕಾರ ನವೀಕರಣಗೊಳಿಸುವುದು ಹಿಂದಿನಿಂದಲೂ ನಡೆದಿದೆ.

ಆದರೆ ವಿಧಾನ ಸೌಧದಲ್ಲಿನ ಕೊಠಡಿಗಳನ್ನು ವಾಸ್ತು ಪ್ರಕಾರ ನವೀಕರಣಗೊಳಿಸಿದ ಉದಾಹರಣೆ ಇಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಖಂಡನೆ: ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಗೋಡೆ ಒಡೆದು ತಮಗೆ ಇಷ್ಟಬಂದಂತೆ ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡಿದವರು ಯಾರು? ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸರ್ಕಾರಿ ಕಚೇರಿಯ ಕೊಠಡಿಯನ್ನು ಮನಬಂದಂತೆ ಬದಲಾವಣೆ ಮಾಡಲು ಅವಕಾಶವಿಲ್ಲ. ಹಂಚಿಕೆಯಾಗಿರುವ ಕೊಠಡಿ ಹೇಗಿದೆಯೋ ಅದೇ ರೀತಿ ಸ್ವೀಕರಿಸಬೇಕು, ಇಷ್ಟವಿಲ್ಲದಿದ್ದರೆ ತಿರಸ್ಕರಿಸಬೇಕು. ಅದು ಬಿಟ್ಟು ವಾಸ್ತು ಹೆಸರಿನಲ್ಲಿ ಗೋಡೆ ಒಡೆಯುವುದು ಸರಿಯಲ್ಲ` ಎಂದು ಟೀಕಿಸಿದರು.

`ಗೋಡೆ ಒಡೆಯುವಂತೆ ನಾನು ಸೂಚನೆ ನೀಡಿಲ್ಲ, ಲೋಕೋಪಯೋಗಿ ಇಲಾಖೆಯವರು ಕೊಠಡಿಯನ್ನು ನವೀಕರಿಸುತ್ತಿದ್ದಾರೆ ಅಷ್ಟೇ` ಎಂದು ಮುನೇನಕೊಪ್ಪ ಪ್ರತಿಕ್ರಿಯಿಸಿದರು.

No comments:

Post a Comment