ನ್ಯಾ. ಮಜಗೆ ಅವರನ್ನು ಉಪ ಲೋಕಾಯುಕ್ತ ಹುದ್ದೆಗೆ ನೇಮಿಸಿ ಸರ್ಕಾರ ಜುಲೈ15ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ವಕೀಲ ಆರ್.ಎಲ್.ಎನ್.ಮೂರ್ತಿ, ಸದರಿ ಆದೇಶವನ್ನು ರದ್ದು ಮಾಡುವಂತೆ ಕೋರಿದ್ದಾರೆ.
ಮಜಗೆ ಅವರನ್ನು ಉಪ ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಿರುವ ಪ್ರಕ್ರಿಯೆಯಲ್ಲಿ 'ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಕಾಯ್ದೆ-1985'ರ ಸೆಕ್ಷನ್ 11(ಇ) ಉಲ್ಲಂಘನೆಯಾಗಿದೆ ಎಂದು ಅವರು ದೂರಿದ್ದಾರೆ.
ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠದ ಮುಂದೆ ಸೋಮವಾರ ಅರ್ಜಿದಾರರು ವಿಷಯ ಪ್ರಸ್ತಾಪಿಸಿದರು. ಅರ್ಜಿ ವಿಚಾರಣೆಯನ್ನು ನ್ಯಾಯಪೀಠವು ಬುಧವಾರಕ್ಕೆ ಮುಂದೂಡಿದೆ.
'ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಕಾಯ್ದೆ-1985'ರ ಸೆಕ್ಷನ್ 11(ಇ) ಪ್ರಕಾರ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಯಾವುದೇ ಸದಸ್ಯರನ್ನು ನಂತರ ಸರ್ಕಾರದ ನೌಕರಿಗೆ ನೇಮಿಸುವಂತಿಲ್ಲ. ಮಂಡಳಿಯ ಅಧ್ಯಕ್ಷರನ್ನು ಹೊರತುಪಡಿಸಿ ಯಾವುದೇ ಸದಸ್ಯನು ಅದೇ ನ್ಯಾಯಮಂಡಳಿಯ ಅಧ್ಯಕ್ಷ ಅಥವಾ ಇತರೆ ನ್ಯಾಯ ಮಂಡಳಿಯ ಅಧ್ಯಕ್ಷ ಅಥವಾ ಸದಸ್ಯನ ಹುದ್ದೆಗೆ ನೇಮಕವಾಗಬಹುದು. ಆದರೆ ಅವರನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರಿಗೆ ನೇಮಿಸುವಂತಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಎಸ್.ಬಿ.ಮಜಗೆ ಅವರನ್ನು ಉಪ ಲೋಕಾಯುಕ್ತರ ಹುದ್ದೆಗೆ ನೇಮಿಸಿರುವ ಕ್ರಮವು 'ಕರ್ನಾಟಕ ಲೋಕಾಯುಕ್ತ ಕಾಯ್ದೆ-1984'ರ ಸೆಕ್ಷನ್ 3(2)(ಬಿ)ಯ ಉಲ್ಲಂಘನೆ ಕೂಡ ಆಗುತ್ತದೆ. ಈ ಸೆಕ್ಷನ್ ಪ್ರಕಾರ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರನ್ನು ಮಾತ್ರ ಉಪ ಲೋಕಾಯುಕ್ತರ ಹುದ್ದೆಗೆ ನೇಮಿಸಬಹುದು. ಆದರೆ ಮಜಗೆ ಅವರು ನಿವೃತ್ತಿಯ ಬಳಿಕ ಕೆಎಟಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರ ನೇಮಕ ಕಾಯ್ದೆಗೆ ವ್ಯತಿರಿಕ್ತವಾಗಿದೆ ಎಂದು ದೂರಿದ್ದಾರೆ.
ಈ ಹಿಂದೆ ಕರ್ನಾಟಕ ಲೋಕ ಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೆಚ್ ಎನ್ ಕೃಷ್ಣನನ್ನು ಕುಮಾರಸ್ವಾಮಿ ಸರ್ಕಾರವು ಮಾಹಿತಿ ಹಕ್ಕು ಆಯೋಗದ ಆಯುಕ್ತನನ್ನಾಗಿ(Information Commissioner) ನೇಮಿಸಿದಾಗ ಶ್ರೀ ವೈ ಎನ್ ನಾಗರಾಜ್ ಎಂಬುವವರು ಈ ಕ್ರಮವನ್ನು ಇದೇ ರೀತಿ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.(ರಿಟ್ ಅರ್ಜಿ ಸಂಖ್ಯೆ :10279/2008 ) ಆದರೆ ದಿನಾಂಕ 5-11-2008 ರಂದು ನ್ಯಾಯಮೂರ್ತಿ ಸಬಾಹಿತ್ ಮತ್ತು ದಿನಕರನ್ ರವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಸದರಿ ತೀರ್ಪನ್ನು ಹೈಕೋರ್ಟ್ ನ ವೆಬ್ಸೈಟ್ ನಲ್ಲಿ ಪಡೆಯಬಹುದು ಈ ಲಿಂಕ್ ಪ್ರಯತ್ನಿಸಿ http://164.100.80.145:8080/dspace/bitstream/123456789/134485/1/WP10279-08-05-11-2008.pdf.
ಈ ಹಿನ್ನೆಲೆಯಲ್ಲಿ ನೋಡಿದರೆ ಈ ರಿಟ್ ಕೂಡ ಡಮಾರ್ ಆಗುವ ಸೂಚನೆಗಳು ಎದ್ದು ಕಾಣುತ್ತವೆ.