http://www.prajavani.net/Content/Sep72010/state20100906203090.asp
ಬೆಂಗಳೂರು: ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಆಪ್ತ
ಹಿರಿಯ ಸಹಾಯಕ ಜಗದೀಶ ರೆಡ್ಡಿ ಸೇರಿದಂತೆ ಆರು ಮಂದಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ
ಹೊರಡಿಸಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಜಮೀನು ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ಇದಕ್ಕೆ ಸಂಬಂಧಿಸಿದ ಎರಡು
ಕಡತಗಳು ನಗರಾಭಿವೃದ್ಧಿ ಸಚಿವಾಲಯದಲ್ಲಿ ಇಲ್ಲ. ಇದಕ್ಕೆ ಕಾರಣರಾದ ಎಲ್ಲರನ್ನೂ ಅಮಾನತು
ಮಾಡಲಾಗಿದೆ.
ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಜೆ.ಸಂಪತ್‌ಕುಮಾರ್ (ಇವರು ಈ ಹಿಂದೆ ನಗರಾಭಿವೃದ್ಧಿ ಇಲಾಖೆ
ಶಾಖಾಧಿಕಾರಿಯಾಗಿದ್ದರು), ಶಾಖಾಧಿಕಾರಿ ಶಾಂತರಾಮ್ ನಾಯಕ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
ಹಿರಿಯ ಸಹಾಯಕ ಟಿ.ಹಾಲಸಿದ್ದಪ್ಪ (ಈ ಹಿಂದೆ ಸಹಾಯಕರು, ನಗರಾಭಿವೃದ್ಧಿ), ಸಹಾಯಕ ಎಲ್.ರಮೇಶ್, ಕಿರಿಯ
ಸಹಾಯಕ ಟಿ.ಎಚ್.ಚಿಕ್ಕಹುಚ್ಚಯ್ಯ ಅಮಾನತುಗೊಂಡ ಸಿಬ್ಬಂದಿ.
ಜಗದೀಶ ರೆಡ್ಡಿ ಕೂಡ ಈ ಹಿಂದೆ ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು
ಬಡ್ತಿ ಪಡೆದು, ಸಚಿವರ ಆಪ್ತ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬಡಾವಣೆ ಸಲುವಾಗಿ 1998ರಲ್ಲಿ ಆರು ಎಕರೆ ಜಾಗ ಸ್ವಾಧೀನಪಡಿಸಿಕೊಂಡಿದ್ದು,
ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿ ಎಂದು ಅದರ ಮಾಲೀಕರು ಸರ್ಕಾರವನ್ನು ಕೋರಿದ್ದರು. ಅಧಿಕಾರಿಗಳು ಇದು
ಸಾಧ್ಯ ಇಲ್ಲವೆಂದು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದರು. ಈ ನಡುವೆ ಆ ಸಂದರ್ಭದಲ್ಲಿ ನಗರಾಭಿವೃದ್ಧಿ
ಸಚಿವರಾಗಿದ್ದವರು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕಡತದಲ್ಲಿಯೂ ಬರೆದಿದ್ದರು. ಇಷ್ಟಾದರೂ ಅದು
ಜಾರಿಯಾಗಿರಲಿಲ್ಲ.
ಇದನ್ನು ಭೂಮಾಲೀಕರು ಪ್ರಶ್ನಿಸಿ ಕೋರ್ಟ್‌ಗೆ ಹೋದರು. ಇದು ಸುಪ್ರೀಂಕೋರ್ಟ್‌ವರೆಗೂ ಹೋಯಿತು. ಸಚಿವರೇ
ಕಡತದಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿ ಎಂದು ಬರೆದಿದ್ದಾರೆ. ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ
ಸಂಬಂಧಿಸಿದ ದಾಖಲೆಗಳನ್ನೂ ಅವರು ಕೋರ್ಟ್ ಮುಂದೆ ಮಂಡಿಸಿದ್ದರು. ಸದರಿ ದಾಖಲೆಗಳನ್ನು ಕೋರ್ಟ್‌ಗೆ
ಸಲ್ಲಿಸುವಂತೆ ಕೋರ್ಟ್, ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತು. ನಂತರ ಇಲಾಖೆಯಲ್ಲಿ ಕಡತಗಳಿಗಾಗಿ
ಹುಡುಕಾಡಿದಾಗ ಅವು ನಾಪತ್ತೆಯಾಗಿರುವುದು ಗೊತ್ತಾಗಿದೆ.
ಕಡತ ಸಂಖ್ಯೆ ನಅಇ 172 ಬೆಮಪ್ರಾ 1998 ಮತ್ತು ನಅಇ 118 ಬೆಮಪ್ರಾ 2000- ಈ ಎರಡೂ ಕಡತಗಳು
ನಾಪತ್ತೆಯಾಗಿರುವುದಕ್ಕೆ ಕಾರಣ ಯಾರು? ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ
ನೀಡುವಂತೆ ಕೋರ್ಟ್ ಸೂಚಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರು ಮಂದಿಯನ್ನು ಅಮಾನತು ಮಾಡಿದ್ದು, ಈ
ವಿಷಯವನ್ನು ಸರ್ಕಾರ ಕೋರ್ಟ್‌ಗೆ ವಿವರಿಸಲಿದೆ ಎಂದು ಗೊತ್ತಾಗಿದೆ.