Sunday, November 28, 2010

BBMP-73 ಅಧಿಕಾರಿ, ಸಿಬ್ಬಂದಿ ಮಾತೃ ಇಲಾಖೆಗೆ

73 ಅಧಿಕಾರಿ, ಸಿಬ್ಬಂದಿ ಮಾತೃ ಇಲಾಖೆಗೆ

ಪ್ರಜಾವಾಣಿ ವಾರ್ತೆ (nov26)




ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 73 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಪಾಲಿಕೆ ಆಯುಕ್ತರು ಗುರುವಾರ ಆದೇಶ ಹೊರಡಿಸಿದ್ದಾರೆ.

ಒಂಬತ್ತು ಕಾರ್ಯಪಾಲಕ ಎಂಜಿನಿಯರ್‌ಗಳು, 16 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, 19 ಸಹಾಯಕ ಎಂಜಿನಿಯರ್‌ಗಳು, 10 ಪ್ರಥಮ ದರ್ಜೆ ಲೆಕ್ಕ ಸಹಾಯಕರು ಹಾಗೂ 8 ಲೆಕ್ಕಾಧೀಕ್ಷಕರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ.


ಬದ್ಧತೆಯಿಲ್ಲದವರು ಅಗತ್ಯವಿಲ್ಲ: 'ಬಿಬಿಎಂಪಿಯಲ್ಲಿ ಮೂರು ಹಾಗೂ ಐದು ವರ್ಷ ಕಾಲ ಎರವಲು ಸೇವೆ ಸಲ್ಲಿಸಿದ 73 ಮಂದಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ. ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಉಳಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಗಮನಿಸಿ ಅಗತ್ಯವಿದ್ದರಷ್ಟೇ ಸೇವೆಯಲ್ಲಿ ಮುಂದುವರಿಸಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.

'ಬದ್ಧತೆಯಿಂದ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು. ನಿರ್ಲಕ್ಷ್ಯ ತೋರುವ ಹಾಗೂ ನಿಯಮಬಾಹಿರವಾಗಿ ಸೇವೆಯಲ್ಲಿ ಮುಂದುವರಿದವರನ್ನು ಮುಲಾಜಿಲ್ಲದೇ ವಾಪಸ್ ಕಳುಹಿಸಲಾಗುವುದು' ಎಂದರು. ಬಿಬಿಎಂಪಿಯಲ್ಲಿ ಮೂರು ಹಾಗೂ ಐದು ವರ್ಷ ಕಾಲ ಎರವಲು ಸೇವೆ ಪೂರ್ಣಗೊಳಿಸಿದವರು ಸೇವೆಯಲ್ಲಿ ಮುಂದುವರಿದಿರುವ ಬಗ್ಗೆ 'ಪ್ರಜಾವಾಣಿ' ವಿಶೇಷ ವರದಿ ಪ್ರಕಟಿಸಿತ್ತು


BBMP-ನಿಯಮ ಉಲ್ಲಂಘಿಸಿ ಎರವಲು ಸೇವೆ’



ಎಂ. ಕೀರ್ತಿಪ್ರಸಾದ್/ಪ್ರಜಾವಾಣಿ ವಾರ್ತೆ (nov 23)



ಬಿಬಿಎಂಪಿಯಲ್ಲಿ ವಿವಿಧ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ





ಅಂದರೆ ಹೆಸರಿಗಷ್ಟೇ ಪಾಲಿಕೆಗೆ ನಿಯೋಜನೆಗೊಂಡು ಬೇರೆಡೆ ಕೆಲಸ ಮಾಡುತ್ತಿರುವುದರಿಂದ ಪಾಲಿಕೆಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಎಂಟು- ಹತ್ತು ಮಂದಿ ಈ ರೀತಿ ಕಾರ್ಯ ನಿರ್ವಹಿಸುತ್ತಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮಾತೃಇಲಾಖೆಗೆ ವಾಪಸ್: 'ಪಾಲಿಕೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ

. ಮೂರು ಮತ್ತು ಐದು ವರ್ಷ ಸೇವೆ ಪೂರ್ಣಗೊಳಿಸಿದವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ಆಯುಕ್ತ ಸಿದ್ದಯ್ಯ 'ಪ್ರಜಾವಾಣಿ'ಗೆ ಹೇಳಿದರು.

ಬೆಂಗಳೂರು: ಬಿಬಿಎಂಪಿಯಲ್ಲಿ ವಿವಿಧ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಮೂರರಿಂದ ಐದು ವರ್ಷ ಎರವಲು ಸೇವೆ ಪೂರ್ಣಗೊಳಿಸಿದ ತರುವಾಯ ಮಾತೃ ಇಲಾಖೆಯಲ್ಲೇ ಎರಡು ವರ್ಷ ಕಾರ್ಯ ನಿರ್ವಹಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ 270ಕ್ಕೂ ಹೆಚ್ಚು ಮಂದಿ ಇಂದಿಗೂ ಎರವಲು ಸೇವೆ ಮುಂದುವರಿಸಿದ್ದಾರೆ.


ಜನತೆಗೆ ಉತ್ತಮ ಸೇವೆ ಹಾಗೂ ದೈನಂದಿಕ ಕಾರ್ಯ ಚಟುವಟಿಕೆಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಅಧಿಕಾರಿ, ಸಿಬ್ಬಂದಿಯನ್ನು ವಿವಿಧ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಪಾಲಿಕೆಗೆ ನಿಯೋಜಿಸಲಾಗುತ್ತದೆ. ಆದರೆ ಎರವಲು ಸೇವೆಯ ಮೇಲೆ ನಿಯೋಜನೆಗೊಂಡವರು ಮೂರು ವರ್ಷಗಳ ಕಾಲ ಸಾಮಾನ್ಯ ಸೇವೆ ಸಲ್ಲಿಸಬಹುದು. ಗರಿಷ್ಠ ಐದು ವರ್ಷ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶವಿದೆ.

ಐದು ವರ್ಷ ಎರವಲು ಸೇವೆ ಪೂರ್ಣಗೊಳಿಸಿದ ಬಳಿಕ ಯಾವುದೇ ಕಾರಣಕ್ಕೂ ಸೇವೆ ಮುಂದುವರಿಸುವಂತಿಲ್ಲ. ಬದಲಿಗೆ ಮಾತೃ ಇಲಾಖೆಗೆ ಹಿಂದಿರುಗಬೇಕು. ಆದರೆ ಎರವಲು ಸೇವೆಯ ಮೇಲೆ ಪಾಲಿಕೆಗೆ ಬರುವವರು 'ಆಯಕಟ್ಟಿ'ನ ಹುದ್ದೆಯ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಸೇವೆ ಮುಂದುವರಿಕೆಗೆ ರಾಜಕೀಯ ಒತ್ತಡವನ್ನು ಸಹ ಹೇರಲಾಗುತ್ತದೆ.

ದಾಖಲೆಗಳ ಪ್ರಕಾರ ಬಿಬಿಎಂಪಿಯಲ್ಲಿ 890ಕ್ಕೂ ಹೆಚ್ಚು ಮಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 67 ಮಂದಿ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪೈಕಿ 41 ಮಂದಿ ಐದು ವರ್ಷ ಮತ್ತು 18 ಮಂದಿ ಮೂರು ವರ್ಷದ ಸೇವೆ ಪೂರ್ಣಗೊಳಿಸಿದ್ದಾರೆ. ಇಂದಿಗೂ ಸೇವೆ ಮುಂದುವರಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ 104 ಮಂದಿ ನಿಯೋಜನೆಗೊಂಡಿದ್ದು, 79 ಮಂದಿ ಐದು ವರ್ಷ ಸೇವೆ ಪೂರ್ಣಗೊಳಿಸಿದ್ದಾರೆ. ಇದರಲ್ಲಿ 38 ಮಂದಿ 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಮುಂದುವರಿಸಿದ್ದಾರೆ. ಎಂಟು ಮಂದಿಯ ಎರವಲು ಸೇವೆ 20 ವರ್ಷ ಮೀರಿದೆ. ನಿಯಮ ಉಲ್ಲಂಘಿಸಿ ಅಧಿಕಾರಿಗಳು ಎರವಲು ಸೇವೆಯಲ್ಲೇ ಮುಂದುವರಿದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುವವರು ಯಾವುದೇ ಲೋಪ ಎಸಗಿದರೆ ಅಥವಾ ಅವ್ಯವಹಾರ ನಡೆಸಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ. ಹೆಚ್ಚೆಂದರೆ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಬಹುದು.

ಉಪ ಆಯುಕ್ತರ ಆದೇಶ ಲೆಕ್ಕಕ್ಕಿಲ್ಲ: ಬಿಬಿಎಂಪಿಯ ಹೊಸ ವಲಯಗಳಾದ ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ದಾಸರಹಳ್ಳಿ ಮತ್ತು ಯಲಹಂಕ ವಲಯಗಳಲ್ಲಿ ಪೌರಾಡಳಿತ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಎರವಲು ಸೇವೆ ಸಲ್ಲಿಸುತ್ತಿರುವವರ ಪೈಕಿ 3 ಮತ್ತು 5 ವರ್ಷ ಸೇವೆ ಪೂರ್ಣಗೊಳಿಸಿದವರನ್ನು ಕೂಡಲೇ ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಉಪ ಆಯುಕ್ತರ (ಆಡಳಿತ) ಆಗಸ್ಟ್ 16ರಂದೇ ಆದೇಶ ಹೊರಡಿಸಿದ್ದರು. ಅತಿ ಜರೂರು ಎಂದು ರವಾನೆಯಾದ ಆದೇಶ ಪತ್ರಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡಿಲ್ಲ.

ನಿಯಮ ಹೇಳುವುದೇನು: ಸರ್ಕಾರಿ ಸೇವಾ ನಿಯಮಾವಳಿಗಳ ನಿಯಮ 50(3) ಹಾಗೂ 419(ಬಿ)ದ ಪ್ರಕಾರ ಸರ್ಕಾರದ ಯಾವುದೇ ಇಲಾಖೆಯಿಂದ ಮತ್ತೊಂದು ಇಲಾಖೆಯಲ್ಲಿ ಅಥವಾ ವಿದೇಶ ಸೇವೆಯಲ್ಲಿ ಎರವಲು ಸೇವೆ ಸಲ್ಲಿಸುವ ಸರ್ಕಾರಿ ನೌಕರರು ಗರಿಷ್ಠ 5 ವರ್ಷ ಮಾತ್ರ ಕಾರ್ಯ ನಿರ್ವಹಿಸಬೇಕು. ಎರವಲು ಸೇವೆ ಆರಂಭದ ಮೂರು ವರ್ಷ ಸಾಮಾನ್ಯ ಅವಧಿ ಹಾಗೂ ಗರಿಷ್ಠ ಐದು ವರ್ಷಗಳಿಗೆ ಸೀಮಿತವಾಗಿರಬೇಕು.

ಎರವಲು ಸೇವೆಯ ಗರಿಷ್ಠ ಅವಧಿ ಐದು ವರ್ಷ ಮುಗಿದ ಬಳಿಕ ಮಾತೃ ಇಲಾಖೆಯಲ್ಲಿ ಕನಿಷ್ಠ ಎರಡು ವರ್ಷವಾದರೂ (ಕೂಲಿಂಗ್ ಆಫ್ ಪೀರಿಯಡ್) ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಮತ್ತೆ ಎರವಲು ಸೇವೆಗೆ ನಿಯೋಜಿಸುವಂತಿಲ್ಲ. ಏನೇ ವಿಶೇಷ ಕಾರಣಗಳಿದ್ದೂ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೇವೆ ಒಂದೆಡೆ; ವೇತನ ಮತ್ತೊಂದೆಡೆ:ಎರವಲು ಸೇವೆಯ ಮೇಲೆ ನಿಯೋಜನೆಗೊಂಡವರು ಪಾಲಿಕೆಯಲ್ಲೇ ಕಾರ್ಯ ನಿರ್ವಹಿಸಬೇಕು. ಆದರೆ ಹೀಗೆ ಬಂದವರು ಬೇರೆಡೆ (ವಿಧಾನಸೌಧ) ಕಾರ್ಯನಿರ್ವಹಿಸುತ್ತಿದ್ದು, ಪಾಲಿಕೆಯಲ್ಲಿ ವೇತನವನ್ನಷ್ಟೇ ಪಡೆಯುತ್ತಿದ್ದಾರೆ.
http://www.prajavani.net/Content/Nov232010/bangalore20101123214269.asp

ಬಿಬಿಎಂಪಿ ಆಡಳಿತಕ್ಕೆ ‘ಮೇಜರ್ ಸರ್ಜರಿ’

ಅಧಿಕಾರಿಗಳ ಸಮಗ್ರ ಮಾಹಿತಿ ಸಂಗ್ರಹಕ್ಕೆ ವಿಶೇಷ ಆಯುಕ್ತರ ಸಮಿತಿ

ಬಿಬಿಎಂಪಿ ಆಡಳಿತಕ್ಕೆ 'ಮೇಜರ್ ಸರ್ಜರಿ'

ಎಂ. ಕೀರ್ತಿಪ್ರಸಾದ್ / ಪ್ರಜಾವಾಣಿ ವಾರ್ತೆ (sept 18)



ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅಗತ್ಯಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳನ್ನು ಪತ್ತೆ ಹಚ್ಚಿ ಮಾತೃ ಇಲಾಖೆಗೆ ವಾಪಸ್ ಕಳಿಸಲು ಆಯುಕ್ತ ಸಿದ್ದಯ್ಯ ಮುಂದಾಗಿದ್ದಾರೆ.


ಎಂಜಿನಿಯರ್‌ಗಳ ವಿವರ

ಮಂಜೂರಾದ ಒಟ್ಟು ಹುದ್ದೆಗಳು 869
ಬಿಬಿಎಂಪಿಗೆ ನೇಮಕವಾದ
ಎಂಜಿನಿಯರ್‌ಗಳು 255
ಎರವಲು ಸೇವೆ ಮೇಲೆ
ನಿಯೋಜಿತ ಎಂಜಿನಿಯರ್‌ಗಳು 542
ಎರವಲು ಸೇವೆ ಸಲ್ಲಿಸುತ್ತಿರುವ
ಸಹಾಯಕ/ಕಿರಿಯಎಂಜಿನಿಯರ್ 294

ಎರವಲು ಸೇವೆಯ ಮೇಲೆ
ನಿಯೋಜನೆಗೊಂಡ ಎಇಇಗಳು 202



ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅಗತ್ಯಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳನ್ನು ಪತ್ತೆ ಹಚ್ಚಿ ಮಾತೃ ಇಲಾಖೆಗೆ ವಾಪಸ್ ಕಳಿಸಲು ಆಯುಕ್ತ ಸಿದ್ದಯ್ಯ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಆಡಳಿತದಲ್ಲಿ 'ಮೇಜರ್ ಸರ್ಜರಿ' ಮಾಡಲು ಸಜ್ಜಾಗಿದ್ದಾರೆ.

ಬಿಬಿಎಂಪಿ ಹಲವು ಅಧಿಕಾರಿಗಳ ಪಾಲಿಗೆ 'ಕಾಮಧೇನು'! ಹಾಗಾಗಿ ಇಲ್ಲಿ ಕಾರ್ಯ ನಿರ್ವಹಿಸಲು ಹಲವು ಇಲಾಖೆಗಳ ಅಧಿಕಾರಿಗಳು ಎಲ್ಲಿಲ್ಲದ ಉತ್ಸಾಹ ತೋರುತ್ತಾರೆ. ಅದರಲ್ಲೂ ಬಹುಪಾಲು ಮಂದಿ ಅಧಿಕಾರಿಗಳು ಎಂಜಿನಿಯರಿಂಗ್ ವಿಭಾಗದ ಮೇಲೆ ಕಣ್ಣಿಟ್ಟಿರುತ್ತಾರೆ.

ಇದಕ್ಕಾಗಿ ಭಾರಿ ರಾಜಕೀಯ ಒತ್ತಡ ತಂದು ಜಾಗ ಗಿಟ್ಟಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಪಾಲಿಕೆಯ ಕಾಯಂ ನೌಕರರಾಗಿರುವ ಎಂಜಿನಿಯರ್‌ಗಳ ದುಪ್ಪಟ್ಟು ಸಂಖ್ಯೆಯಷ್ಟು ಎಂಜಿನಿಯರ್‌ಗಳು ಇತರೆ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ!

ಆಯಕಟ್ಟಿನ ಹುದ್ದೆಗಳು: ಪಾಲಿಕೆಯಲ್ಲಿ ಕಾಮಗಾರಿ ಹಾಗೂ ನಗರ ಯೋಜನೆ ವಿಭಾಗಗಳು ಆಯಕಟ್ಟಿನ ಜಾಗಗಳು. ಕಾಮಗಾರಿ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳು ನಡೆಯುತ್ತವೆ. ಲಕ್ಷ- ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳ ನಿರ್ಮಾಣಕ್ಕೆ ನಗರ ಯೋಜನೆ ವಿಭಾಗ ಅನುಮತಿ ನೀಡಬೇಕಾಗುತ್ತದೆ. ಹಾಗಾಗಿ ಎರವಲು ಸೇವೆಯ ಮೇಲೆ ನಿಯೋಜನೆ ಗೊಳ್ಳುವವರು ಈ ಹುದ್ದೆ ಗಳನ್ನೇ ಗುರಿಯಾಗಿಸಿಕೊಂಡಿರುತ್ತಾರೆ.

ನಗರದ ವಾರ್ಡ್‌ಗಳ ಸಂಖ್ಯೆ 100ಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಮಂಜೂರಾದ 262 ಎಂಜಿನಿಯರ್ ಹುದ್ದೆಗಳಿದ್ದವು. ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ನಂತರ ಮಂಜೂರಾದ 240 ಹುದ್ದೆಗಳನ್ನು ಸೃಷ್ಟಿಸಲಾಯಿತು. 2008ರ ಜುಲೈ 25ರಂದು 367 ಮಂದಿ ಎಂಜಿನಿಯರ್‌ಗಳ ಹುದ್ದೆ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದರಂತೆ ಒಟ್ಟು 869 ಎಂಜಿನಿಯರ್ ಹುದ್ದೆಗಳು ಮಂಜೂರಾಗಿವೆ.

ಆದರೆ ಪಾಲಿಕೆಗೆ ನೇರವಾಗಿ ಆಯ್ಕೆಯಾದ 255 ಮಂದಿ ಎಂಜಿನಿಯರ್‌ಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಅಂದರೆ 542 ಮಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. 294 ಮಂದಿ ಸಹಾಯಕ/ ಕಿರಿಯ ಎಂಜಿನಿಯರ್‌ಗಳು ಎರವಲು ಸೇವೆಯ ಮೇಲೆ ಕೆಲಸ ಮಾಡುತ್ತಿದ್ದಾರೆ.

ಈ 542 ಮಂದಿ ಎಂಜಿನಿಯರ್‌ಗಳು ಕರ್ತವ್ಯದಲ್ಲಿ ಲೋಪ ಎಸಗಿದರೂ ಅವರ ವಿರುದ್ಧ ಕ್ರಮ ಜರುಗಿಸಲು ಬಿಬಿಎಂಪಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಎರವಲು ಸೇವೆಯ ಮೇಲೆ ನಿಯೋಜನೆಗೊಂಡ ಸಹಾಯಕ ಎಂಜಿನಿಯರ್‌ಗೆ ನೀಡುವ ಸಂಬಳದ ಹಣದಲ್ಲಿ ಪಾಲಿಕೆಯ ಇಬ್ಬರು ಸಹಾಯಕ ಎಂಜಿನಿಯರ್‌ಗಳಿಗೆ ವೇತನ ನೀಡಬಹುದು ಎಂದು ಪಾಲಿಕೆ ಅಧಿಕಾರಿಗಳೇ ಹೇಳುತ್ತಾರೆ.

ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ನೌಕರರ ಕುರಿತು ಸಮೀಕ್ಷೆ ನಡೆಸಲು ಆಯುಕ್ತರು ನಿರ್ಧರಿಸಿದ್ದಾರೆ. ಬಿಬಿಎಂಪಿಗೆ ಎಷ್ಟು ಸಿಬ್ಬಂದಿ- ಅಧಿಕಾರಿಗಳ ಅಗತ್ಯವಿದೆ, ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ- ಅಧಿಕಾರಿಗಳ ವಿವರ, ಅವರ ಕಾರ್ಯಕ್ಷಮತೆ ಇತರೆ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆಯುವ ಉದ್ದೇಶದಿಂದ ವಿಶೇಷ ಆಯುಕ್ತ ನಿರಂಜನ್ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ.

ಎಂಜಿನಿಯರಿಂಗ್ ಚೀಫ್ ಎ.ಕೆ. ಗೋಪಾಲಸ್ವಾಮಿ, ಉಪ ಆಯುಕ್ತ (ಆಡಳಿತ) ಮಂಜುನಾಥ್ ಕೂಡ ಸಮಿತಿಯಲ್ಲಿದ್ದಾರೆ.
ಕೆಲಸ ಹಂಚಿಕೆ ಏರುಪೇರು: 'ಬಿಬಿಎಂಪಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೇ ಎರವಲು ಸೇವೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಇದೆ. ಹಾಗಾಗಿ ಪಾಲಿಕೆಯಲ್ಲಿರುವ ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಗೂ ಅವರ ಜವಾಬ್ದಾರಿಗಳ ಕುರಿತು ಸಮಗ್ರ ವಿವರ ಸಂಗ್ರಹಿಸಲು ವಿಶೇಷ ಆಯುಕ್ತರ ನೇತೃತ್ವದ ಸಮಿತಿಗೆ ಸೂಚಿಸಲಾಗಿದೆ' ಎಂದು ಆಯುಕ್ತ ಸಿದ್ದಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.

'ಹಲವು ವಿಭಾಗಗಳಲ್ಲಿ ಕೆಲಸದ ಹಂಚಿಕೆ ಸಮ ಪ್ರಮಾಣದಲ್ಲಿ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಕೆಲವು ವಲಯಗಳಲ್ಲಿ ಡ್ರಾಫ್ಟ್ ಮನ್‌ಗಳಿಗೆ (ಸಹಾಯಕ ಎಂಜಿನಿಯರ್) ಕೆಲಸವೇ ಇಲ್ಲದಿರುವುದು ಕಂಡುಬಂದಿದೆ. ತಿಂಗಳಿಗೆ ಒಂದೆರಡು ಕಡತಗಳ ಪರಿಶೀಲನೆ ಹೊರತು ಪಡಿಸಿ ಉಳಿದಂತೆ ಯಾವುದೇ ಜವಾಬ್ದಾರಿ ನೀಡಿಲ್ಲ. ಇಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು' ಎಂದರು.

'ಇತ್ತೀಚೆಗಷ್ಟೇ 119 ಮಂದಿ ಪರಿಸರ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಎರಡು ವಾರ್ಡ್‌ಗಳಿಗೆ ಒಬ್ಬ ಪರಿಸರ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಇವರು ತ್ಯಾಜ್ಯ ಸಂಗ್ರಹಣೆ- ಸಾಗಣೆ ಕಾರ್ಯದ ಮೇಲ್ವಿಚಾರಣೆ ನಡೆಸಲಿದ್ದಾರೆ. ಬೆಳಿಗ್ಗೆ 11ರ ನಂತರ ಇವರಿಗೆ ಯಾವುದೇ ಕೆಲಸವಿರುವುದಿಲ್ಲ. ಇವರನ್ನು ಬೇರೆ ಕೆಲಸಗಳಿಗೆ ನಿಯೋಜಿಸುವತ್ತ ಚಿಂತನೆ ನಡೆದಿದೆ' ಎಂದು ವಿವರಿಸಿದರು.

ವಾರದ ಗಡುವು: 'ಪಾಲಿಕೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಗ್ರ ವಿವರವನ್ನು ವಾರದೊಳಗೆ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಮಾಹಿತಿ ಕೈಸೇರಿದ ಬಳಿಕ ಬದಲಾವಣೆ ಮಾಡಲಾಗುವುದು' ಎಂದರು.


Saturday, November 20, 2010

ಗ್ರಂಥಾಲಯ ಸಿಬ್ಬಂದಿಗೆ ಸಚಿವ ಭರವಸೆ -ವೇತನ ತಾರತಮ್ಯ ನಿವಾರಣೆಗೆ ಯತ್ನ

prajavani,  Nov 15,2010

ಮೈಸೂರು: 'ಗ್ರಂಥಾಲಯದ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು' ಸಾರ್ವಜನಿಕ ಗ್ರಂಥಾಲಯ, ಸಣ್ಣ ಉಳಿತಾಯ ಹಾಗೂ ಲಾಟರಿ ಸಚಿವ ರೇವೂನಾಯಕ ಬೆಳಮಗಿ ಭಾನುವಾರ ಹೇಳಿದರು.


ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಂಥಾಲಯ ಸಿಬ್ಬಂದಿಯನ್ನು ಪುರಸ್ಕರಿಸಿ ಅವರು ಮಾತನಾಡಿದರು. 

'ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಲ್ಲಿ ಕೆಲಸ ಮಾಡುವ ಮೇಲ್ವಿಚಾರಕರಿಗೆ ಬೆಂಗಳೂರಿನಲ್ಲಿ 2,500 ರೂಪಾಯಿ ವೇತನ ನೀಡುತ್ತಿದ್ದು, ಮೈಸೂರಿನಲ್ಲಿ 1,500 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಕೆಲವರು ಮನವಿ ಸಲ್ಲಿಸಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಸಿಬ್ಬಂದಿ ವೇತನ ತಾರ ತಮ್ಯ ನಿವಾರಣೆ ಮಾಡಲಾಗುವುದು' ಎಂದರು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲ -1155 ಭೂಮಾಪಕರ ನೇಮಕಾತಿ ನೆನೆಗುದಿಗೆ

 ಪ್ರಜಾವಾಣಿ ವಾರ್ತೆ-  prajavani nov 15,2010
  
 
ಹೊಸ ನಿಯಮಾವಳಿ ಪ್ರಕಾರ ಭೂಮಾಪಕರ ಹುದ್ದೆಗಳನ್ನು ಇಲಾಖೆಯೇ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಇದಕ್ಕಾಗಿ ನೇಮಕಾತಿ ಸಮಿತಿಯನ್ನು ರಚಿಸಲಾಗಿದೆ. 
 

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲದಿಂದಾಗಿ ಭೂಮಾಪನ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ 1155 ಭೂಮಾಪಕರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಅಲ್ಲದೆ ನೇಮಕಾತಿ ಸಂಬಂಧ ಇಲಾಖೆಯು ತಾನು ಮಾಡಿದ ನಿಯಮಗಳನ್ನೇ ಗಾಳಿಗೆ ತೂರಿರುವ ಅಂಶವೂ ಬೆಳಕಿಗೆ ಬಂದಿದೆ.

ಭೂಮಾಪನ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಕಳೆದ ಡಿಸೆಂಬರ್‌ನಲ್ಲಿ ಹೊಸದಾಗಿ ರೂಪಿಸಲಾಗಿದೆ.ಇದಾದ ನಂತರ 'ಸಿ' ದರ್ಜೆಯ 1155 ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಆದರೆ ಹೊಸ ನಿಯಮಾವಳಿ ಪ್ರಕಾರ ಭೂಮಾಪಕರ ಹುದ್ದೆಗಳನ್ನು ಇಲಾಖೆಯೇ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಇದಕ್ಕಾಗಿ ನೇಮಕಾತಿ ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ಮಟ್ಟದ ಸಮಿತಿಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅರ್ಹತೆಯನ್ನು ಆಧರಿಸಿ ನೇಮಕಾತಿ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

 
ನಿಯಮಗಳಲ್ಲಿ ಈ ರೀತಿ ಹೇಳಿರುವಾಗ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ.ಸೂಕ್ತ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಆಯೋಗವು ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ಹೇಳಿ, ಕೆಪಿಎಸ್‌ಸಿ ಮೂರು ತಿಂಗಳ ಹಿಂದೆಯೇ ಇಲಾಖೆಗೆ ಪತ್ರವನ್ನು ಬರೆದಿದೆ.

ಅಲ್ಲದೆ ಭೂಮಾಪಕರ ಹುದ್ದೆಗಳಿಗೆ ಮೊದಲ ಬಾರಿಗೆ ಬಿ.ಇ (ಸಿವಿಲ್) ಅಥವಾ ಬಿ.ಟೆಕ್ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ಹೊಸ ನಿಯಮಾವಳಿ ಜಾರಿಗೆ ಮುನ್ನ ಭೂಮಾಪಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಮತ್ತು ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿತ್ತು.ಈಗ ಉನ್ನತ ವಿದ್ಯಾರ್ಹತೆ ನಿಗದಿ ಮಾಡಿರುವುದಕ್ಕೆ ಆಯೋಗವು ಆಕ್ಷೇಪ ವ್ಯಕ್ತಪಡಿಸಿದೆ.

ಭೂಮಾಪಕರ ಹುದ್ದೆಗಳು 'ಸಿ' ವೃಂದದ ಹುದ್ದೆಯಾಗಿದ್ದು ರೂ 6250-12000 ವೇತನ ಶ್ರೇಣಿಯನ್ನು ಹೊಂದಿರುತ್ತದೆ.ಹೀಗಾಗಿ ಬಿ.ಇ, ಬಿ.ಟೆಕ್ ಉನ್ನತ ವಿದ್ಯಾರ್ಹತೆ ಎಂದು ಕಂಡುಬರುತ್ತದೆ. ಈ ವಿದ್ಯಾರ್ಹತೆ ನಿಗದಿ ಮಾಡುವುದು ಸೂಕ್ತವಲ್ಲ. ಸಾಮಾನ್ಯ ವಿದ್ಯಾರ್ಹತೆಯನ್ನು ನಿಗದಿ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಆಯೋಗವು ಪತ್ರದಲ್ಲಿ ವ್ಯಕ್ತಪಡಿಸಿತ್ತು.

ಆದರೆ ಈ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ಭೂಮಾಪನ ಇಲಾಖೆಯಿಂದ ಆಯೋಗಕ್ಕೆ ಉತ್ತರ ಬಂದಿಲ್ಲ.ಹೀಗಾಗಿ ಇಲಾಖೆ ಕಳುಹಿಸಿರುವ ಪ್ರಸ್ತಾವವನ್ನು ಆಯೋಗವು ಹಾಗೆಯೇ ಇಟ್ಟುಕೊಂಡಿದ್ದು, ತಿದ್ದುಪಡಿಯಾಗದ ಹೊರತು ಯಥಾವತ್ತಾಗಿ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಒಂದೇ ಹುದ್ದೆಗೆ ಬೇರೆ ಬೇರೆ ವಿದ್ಯಾರ್ಹತೆಯನ್ನು ನಿಗದಿ ಮಾಡಿರುವುದರಿಂದ ಅಂಕಗಳ ಮಾನದಂಡವನ್ನು ನಿಗದಿಪಡಿಸುವುದು ಕಷ್ಟವಾಗುತ್ತದೆ. ಅಲ್ಲದೆ 'ಸಿ' ದರ್ಜೆಯ ಹುದ್ದೆಗೆ ಉನ್ನತ ವಿದ್ಯಾರ್ಹತೆ ಅಗತ್ಯವಿಲ್ಲ ಎಂಬುದು ಆಯೋಗದ ಅಭಿಪ್ರಾಯವಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂಬುದಾಗಿ ಆಯೋಗದ ಅಧ್ಯಕ್ಷ ಗೋನಾಳ ಭೀಮಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಆಡಳಿತದ ಮೇಲೆ ಪರಿಣಾಮ: ನೇಮಕಾತಿ ವಿಳಂಬವಾಗಿರುವುದರಿಂದ ರೈತರ ಭೂಮಿ ಸರ್ವೇ ಕಾರ್ಯಕ್ಕೆ ತೊಂದರೆಯಾಗಿದೆ. ಸರ್ವೆಗಾಗಿ ಅನೇಕ ವರ್ಷಗಳಿಂದ ಲಕ್ಷಾಂತರ ಅರ್ಜಿಗಳು ಕಾಯುತ್ತಾ ಕುಳಿತಿವೆ. ಸಿಬ್ಬಂದಿ ಕೊರತೆ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ದುರಸ್ತಿ (ಸರ್ವೇ) ಕಾರ್ಯ ಸ್ಥಗಿತಗೊಂಡಿದೆ. ದುರಸ್ತಿಯಾಗದ ಹೊರತು ಮಾರಾಟ ಮಾಡಿದ ಆಸ್ತಿ ನೋಂದಣಿಯಾಗುತ್ತಿಲ್ಲ. ಹೀಗಾಗಿ ತೊಂದರೆಯಾಗಿದೆ ಎಂಬುದು ರೈತರ ಅಳಲು.
ಪ್ರತಿಕ್ರಿಯೆಗೆ ನಕಾರ: ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲದ ಬಗ್ಗೆ ಭೂಮಾಪನ ಇಲಾಖೆಯ ಆಯುಕ್ತರಾದ ಜಿ.ಕಲ್ಪನಾ ಅವರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.