ಪ್ರಕಟಿಸಿದ ದಿನಾಂಕ : 2010-08-30
http://www.gulfkannadiga.com/news-30276.html
ಮೈಸೂರು: ಮಾಜಿ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್ ತಕ್ಷಣ ಪಾಲಿಸಿದ್ದರೆ ಈಗಿನ ಗದ್ದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಕ್ರಮ ಜರುಗಿಸಲು ಕುಲಪತಿಗಳು ಮಾಡಿದ ವಿಳಂಬವನ್ನೇ ಬಳಸಿಕೊಂಡ ರಾಜ್ಯಪಾಲ ಎಚ್.ಆರ್.ಭಾರದ್ವಾಜ ಅವರು ವಿಶ್ವವಿದ್ಯಾಲಯದ ಕಾಯಿದೆಯ ಆಯ್ದಭಾಗಗಳನ್ನಷ್ಟೇ ಉಲ್ಲೇಖಿಸುತ್ತಾ ಮಧ್ಯಪ್ರವೇಶಿಸಿದ್ದಾರೆ. ನಿಜಕ್ಕೂ ಮಾಜಿ ಕುಲಪತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಾಧ್ಯ ಇಲ್ಲವೇ?
ಮೈಸೂರು ವಿಶ್ವವಿದ್ಯಾಲಯದ ನೇಮಕಾತಿಯಲ್ಲಿನ ಅಕ್ರಮ ಮಾತ್ರವಲ್ಲ, ಅದನ್ನು ಮುಚ್ಚಿಹಾಕುವ ಪ್ರಯತ್ನ ಕೂಡಾ ವ್ಯವಸ್ಥಿತ ವಾಗಿ ನಡೆದಿರುವುದು ಈ ಪ್ರಕರಣದ ತನಿಖೆಯಿಂದ ಸ್ಪಷ್ಟವಾಗುತ್ತದೆ. ಮಾಜಿ ಕುಲಪತಿಗಳ ವಿರುದ್ಧ ಕ್ರಮ ಜರುಗಿಸು ವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿದ್ದು ಕಳೆದ ಜೂನ್ ಒಂಭತ್ತರಂದು. ಇದಾದ ನಂತರ ಈ ಬಗ್ಗೆ ಚರ್ಚೆಗೆ ಕುಲಪತಿಗಳು ಜೂನ್ 15ಕ್ಕೆ ಸಿಂಡಿಕೇಟ್‌ನ ವಿಶೇಷ ಸಭೆ ಕರೆಯುತ್ತಾರೆ. ಅದನ್ನು 19ಕ್ಕೆ ಮುಂದೂಡಲಾಗುತ್ತದೆ. ಮತ್ತೊಮ್ಮೆ ಮುಂದೂಡಿ ಕೊನೆಗೆ ಜೂನ್ 24ರ ಮಧ್ಯಾಹ್ನ ಮೂರು ಗಂಟೆಗೆ ಸಿಂಡಿಕೇಟ್ ಸಭೆ ನಿಗದಿಪಡಿಸಲಾಗುತ್ತದೆ. ಆ ಸಭೆ ನಡೆಯುವ ಒಂದು ಗಂಟೆ ಮೊದಲು ತನ್ನ ಹಿಂದಿನ ಆದೇಶದನ್ವಯ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದ ರಾಜ್ಯ ಸರ್ಕಾರದ ಪತ್ರ ವೊಂದು ಫ್ಯಾಕ್ಸ್ ಮೂಲಕ ಬರುತ್ತದೆ. ಈ ಹದಿನೈದು ದಿನಗಳ ಅವಧಿಯಲ್ಲಿ ನಡೆದದ್ದೇನು ಎಂಬುದು ಬಹಿರಂಗಗೊಂಡರೆ ಅಕ್ರಮ ನೇಮಕಾತಿ ಹಗರಣದ ಇನ್ನೊಂದು ಮುಖವೂ ಬಯಲಾಗಬಹುದು.
ಸಾಯಿಬಾಬಾ ಪವಾಡ?
ಈ ಅವಧಿಯಲ್ಲಿಯೇ ಪ್ರೊ.ಶಶಿಧರ ಪ್ರಸಾದ್ ಅವರು ಪುಟ್ಟಪರ್ತಿ ಸತ್ಯಸಾಯಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು. ಆದ್ದರಿಂದ ಹದಿನೈದು ದಿನಗಳ ಅವಧಿಯಲ್ಲಿ ನಡೆದ ರಾಜ್ಯಪಾಲರ ಮಧ್ಯಪ್ರವೇಶ ಮತ್ತು ಬದಲಾದ ಸರ್ಕಾರದ ನಿಲುವಿಗೆ 'ಸಾಯಿಬಾಬಾರ ಪವಾಡ' ಕಾರಣ ಎನ್ನುವವರಿದ್ದಾರೆ. ಆದರೆ ರಾಜ್ಯಪಾಲ ಭಾರದ್ವಾಜ ಅವರು ನೀಡಿರುವ ಕಾರಣವೇ ಬೇರೆ.
ಕುಲಪತಿ ಇಲ್ಲವೇ ವಿಶ್ವವಿದ್ಯಾಲಯದ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಾಗ ಕರ್ನಾಟಕ ವಿಶ್ವವಿದ್ಯಾಲಯದ ಕಾಯಿದೆಯ ಸೆಕ್ಷನ್ 8ರ ಪ್ರಕಾರ ಕುಲಾಧಿಪತಿಗಳಾದ ರಾಜ್ಯಪಾಲರು ಸ್ವಪ್ರೇರಣೆಯಿಂದ ವಿಚಾರಣೆಗೆ ಆದೇಶ ನೀಡಬಹುದು. ಇಲ್ಲವೇ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬಹುದು. ಸೆಕ್ಷನ್ 8(4)ರ ಪ್ರಕಾರ ವಿಚಾರಣಾ ವರದಿಯನ್ನು ಸ್ವೀಕರಿಸಿದ ನಂತರ ಅಗತ್ಯ ಕಂಡುಬಂದರೆ ಕ್ರಮಕೈಗೊಳ್ಳುವಂತೆ ಕುಲಾಧಿಪತಿಗಳು ಸರ್ಕಾರಕ್ಕೆ ನಿರ್ದೇಶನ ನೀಡಬಹುದು. ಒಂದು ವೇಳೆ ಸರ್ಕಾರ ಆದೇಶವನ್ನು ಪಾಲಿಸಲು ಕುಲಪತಿಗಳು ವಿಫಲವಾದರೆ ಅದನ್ನು ಸರ್ಕಾರ ಕುಲಾಧಿಪತಿಗಳ ಗಮನಕ್ಕೆ ತರಬೇಕು. ಅಂತಿಮ ವಾಗಿ ರಾಜ್ಯಪಾಲರ ಆದೇಶವನ್ನು ಕುಲಪತಿಗಳು ಪಾಲಿಸಬೇಕಾಗುತ್ತದೆ.
ರಾಜ್ಯಪಾಲ ಭಾರದ್ವಾಜ ಅವರು ಮತ್ತೆಮತ್ತೆ ಉಲ್ಲೇಖಿಸುತ್ತಿರುವುದು ಈ ಸೆಕ್ಷನ್ 8 ಅನ್ನು ಮಾತ್ರ. ಕುಲಪತಿಗಳ ವಜಾಕ್ಕೆ ಸಂಬಂಧಿಸಿದ ಸೆಕ್ಷನ್ 14(7) ಅನ್ನು ಅವರು ಪ್ರಸ್ತಾಪಿಸುತ್ತಲೇ ಇಲ್ಲ. ಈ ಸೆಕ್ಷನ್ ಪ್ರಕಾರ '...ವಿಶ್ವವಿದ್ಯಾಲಯದ ಕಾಯಿದೆಯ ಉಲ್ಲಂಘನೆ ಇಲ್ಲವೇ ಅಧಿಕಾರದ ದುರುಪಯೋಗ ನಡೆದಿರುವುದು ತನಿಖೆಯಿಂದ ಸಾಬೀತಾದರೆ ಕುಲಪತಿಗಳನ್ನು ವಜಾ ಮಾಡಬಹುದು...'
ಆದರೆ ಪ್ರೊ.ಶಶಿಧರಪ್ರಸಾದ್ ಅವರು ಅಧಿಕಾರದಲ್ಲಿ ಇಲ್ಲದೆ ಇರುವುದರಿಂದ ಅವರನ್ನು ವಜಾ ಮಾಡುವ ಪ್ರಶ್ನೆ ಉದ್ಭವಿಸದು. ಅವರು ಕುಲಪತಿಗಳಲ್ಲದೆ ಇರುವುದರಿಂದ ವಿಶ್ವವಿದ್ಯಾಲಯದ ಕಾಯಿದೆಯಲ್ಲಿನ ಯಾವ ರಕ್ಷಣೆಯೂ ಅವರಿಗೆ ಸಿಗದು. ಆದ್ದರಿಂದ ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವೈಯಕ್ತಿಕ ನೆಲೆಯಲ್ಲಿ ಅಪರಾಧ ಎಸಗಿದ್ದರೆ, ಆತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯ ಇದೆ ಎನ್ನುತ್ತಾರೆ ಕಾನೂನು ತಜ್ಞರು.
ಮೈಸೂರು ವಿ.ವಿ.ನೇಮಕಾತಿಗೆ ಸಂಬಂಧಿಸಿ ಮಾಡಲಾದ ಮುಖ್ಯ ಆರೋಪ ಮೀಸಲಾತಿ ಉಲ್ಲಂಘನೆಯದ್ದು. 12 ಪ್ರೊಫೆಸರ್, 28 ರೀಡರ್ಸ್ ಮತ್ತು 15 ಉಪನ್ಯಾಸಕರ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಆ ಕಾಲದಲ್ಲಿ ಕುಲಪತಿಯಾಗಿದ್ದ ಶಶಿಧರಪ್ರಸಾದ್ ಅವರು ರಾಜ್ಯಸರ್ಕಾರದ 25-6-1995ರ ಆದೇಶವನ್ನು ಉಲ್ಲಂಘಿಸಿ ' 'ಬೇರೆ ವರ್ಗಗಳ'(ಮೀಸಲಾತಿಗೆ ಅರ್ಹರಲ್ಲದ) ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮೀಸಲಾತಿ ವರ್ಗೀಕರಣ ಮತ್ತು ಅರ್ಜಿಗಳನ್ನು ಆಹ್ಹಾನಿಸಿ ನೀಡಲಾದ ಜಾಹೀರಾತನ್ನು ನೀಡಿದ್ದು
ವಿಶ್ವವಿದ್ಯಾಲಯವಾಗಿರುವ ಕಾರಣ ಕೇವಲ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನೇಮಕಾತಿ ಮಂಡಳಿ ಸದಸ್ಯರ ಪಾತ್ರ ಅಕ್ರಮದಲ್ಲಿ ಇಲ್ಲ' ಎಂದು ನ್ಯಾಯಮೂರ್ತಿ ರಂಗ ವಿಠಲಾಚಾರ್ ಸಮಿತಿ ಅಭಿಪ್ರಾಯಪಟ್ಟಿದೆ. ಈ ಮೂಲಕ ಕ್ರಿಮಿನಲ್ ಅಪರಾಧವಾಗಿರುವ ಮೀಸ ಲಾತಿ ಉಲ್ಲಂಘನೆಗೆ ಕುಲಪತಿಯೊಬ್ಬರೇ ಹೊಣೆ ಎಂದು ಹೇಳಿದೆ.
ತನಿಖಾ ಸಮಿತಿ ನೇಮಕಾತಿ ಮಂಡಳಿ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಿದ್ದು ನಾಲ್ಕು ಪ್ರೊಫೆಸರ್, 11 ರೀಡರ್, 33 ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಮಾತ್ರ. ವಾಣಿಜ್ಯ ವಿಭಾಗದ ಪ್ರೊಫೆಸರ್ ಹುದ್ದೆಗೆ ಆಯ್ಕೆ ಮಂಡಳಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಬದಲಿಗೆ ಬೇರೆ ಇಬ್ಬರನ್ನು ಆಯ್ಕೆ ಮಾಡುವ ಮೂಲಕ 'ವಿಶ್ವವಿದ್ಯಾಲಯ ಸಂದರ್ಶನ ನಿರ್ವಹಣಾ'ಕಾಯಿದೆಯನ್ನು ಉಲ್ಲಂಘಿಸಲಾಗಿದೆ. ಈ ಅಪರಾಧಕ್ಕೆ ನೇಮಕಾತಿ ಮಂಡಳಿ ಸದಸ್ಯರು ಕೂಡಾ ಹೊಣೆಗಾರರು ಎಂದು ತನಿಖಾ ಸಮಿತಿ ಹೇಳಿದೆ.
ಯಾರು ಯಾವ ತಪ್ಪು ಮಾಡಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮವೆನೆಂಬುದನ್ನು ಸೂಚಿಸಿದ್ದ ತನಿಖಾ ಸಮಿತಿ ಮುಖ್ಯಸ್ಥರು, ಒಂದು ಕಾಲದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದವರು. ಇಂತಹ ಕ್ರಮ ಸಾಧ್ಯ ಇಲ್ಲ ಎಂದು ಹೇಳುತ್ತಿರುವ ರಾಜ್ಯಪಾಲರು ಒಂದು ಕಾಲದಲ್ಲಿ ನ್ಯಾಯವಾದಿಗಳಾಗಿದ್ದವರು ಮತ್ತು ಜತೆಯಲ್ಲಿಯೇ ರಾಜಕಾರಣದಲ್ಲಿದ್ದವರು. ಜನರು ಯಾರನ್ನು ನಂಬಬೇಕು?