Saturday, November 20, 2010

ಗ್ರಂಥಾಲಯ ಸಿಬ್ಬಂದಿಗೆ ಸಚಿವ ಭರವಸೆ -ವೇತನ ತಾರತಮ್ಯ ನಿವಾರಣೆಗೆ ಯತ್ನ

prajavani,  Nov 15,2010

ಮೈಸೂರು: 'ಗ್ರಂಥಾಲಯದ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು' ಸಾರ್ವಜನಿಕ ಗ್ರಂಥಾಲಯ, ಸಣ್ಣ ಉಳಿತಾಯ ಹಾಗೂ ಲಾಟರಿ ಸಚಿವ ರೇವೂನಾಯಕ ಬೆಳಮಗಿ ಭಾನುವಾರ ಹೇಳಿದರು.


ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಂಥಾಲಯ ಸಿಬ್ಬಂದಿಯನ್ನು ಪುರಸ್ಕರಿಸಿ ಅವರು ಮಾತನಾಡಿದರು. 

'ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಲ್ಲಿ ಕೆಲಸ ಮಾಡುವ ಮೇಲ್ವಿಚಾರಕರಿಗೆ ಬೆಂಗಳೂರಿನಲ್ಲಿ 2,500 ರೂಪಾಯಿ ವೇತನ ನೀಡುತ್ತಿದ್ದು, ಮೈಸೂರಿನಲ್ಲಿ 1,500 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಕೆಲವರು ಮನವಿ ಸಲ್ಲಿಸಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಸಿಬ್ಬಂದಿ ವೇತನ ತಾರ ತಮ್ಯ ನಿವಾರಣೆ ಮಾಡಲಾಗುವುದು' ಎಂದರು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲ -1155 ಭೂಮಾಪಕರ ನೇಮಕಾತಿ ನೆನೆಗುದಿಗೆ

 ಪ್ರಜಾವಾಣಿ ವಾರ್ತೆ-  prajavani nov 15,2010
  
 
ಹೊಸ ನಿಯಮಾವಳಿ ಪ್ರಕಾರ ಭೂಮಾಪಕರ ಹುದ್ದೆಗಳನ್ನು ಇಲಾಖೆಯೇ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಇದಕ್ಕಾಗಿ ನೇಮಕಾತಿ ಸಮಿತಿಯನ್ನು ರಚಿಸಲಾಗಿದೆ. 
 

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲದಿಂದಾಗಿ ಭೂಮಾಪನ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ 1155 ಭೂಮಾಪಕರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಅಲ್ಲದೆ ನೇಮಕಾತಿ ಸಂಬಂಧ ಇಲಾಖೆಯು ತಾನು ಮಾಡಿದ ನಿಯಮಗಳನ್ನೇ ಗಾಳಿಗೆ ತೂರಿರುವ ಅಂಶವೂ ಬೆಳಕಿಗೆ ಬಂದಿದೆ.

ಭೂಮಾಪನ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಕಳೆದ ಡಿಸೆಂಬರ್‌ನಲ್ಲಿ ಹೊಸದಾಗಿ ರೂಪಿಸಲಾಗಿದೆ.ಇದಾದ ನಂತರ 'ಸಿ' ದರ್ಜೆಯ 1155 ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಆದರೆ ಹೊಸ ನಿಯಮಾವಳಿ ಪ್ರಕಾರ ಭೂಮಾಪಕರ ಹುದ್ದೆಗಳನ್ನು ಇಲಾಖೆಯೇ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಇದಕ್ಕಾಗಿ ನೇಮಕಾತಿ ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ಮಟ್ಟದ ಸಮಿತಿಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅರ್ಹತೆಯನ್ನು ಆಧರಿಸಿ ನೇಮಕಾತಿ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

 
ನಿಯಮಗಳಲ್ಲಿ ಈ ರೀತಿ ಹೇಳಿರುವಾಗ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ.ಸೂಕ್ತ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಆಯೋಗವು ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ಹೇಳಿ, ಕೆಪಿಎಸ್‌ಸಿ ಮೂರು ತಿಂಗಳ ಹಿಂದೆಯೇ ಇಲಾಖೆಗೆ ಪತ್ರವನ್ನು ಬರೆದಿದೆ.

ಅಲ್ಲದೆ ಭೂಮಾಪಕರ ಹುದ್ದೆಗಳಿಗೆ ಮೊದಲ ಬಾರಿಗೆ ಬಿ.ಇ (ಸಿವಿಲ್) ಅಥವಾ ಬಿ.ಟೆಕ್ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ಹೊಸ ನಿಯಮಾವಳಿ ಜಾರಿಗೆ ಮುನ್ನ ಭೂಮಾಪಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಮತ್ತು ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿತ್ತು.ಈಗ ಉನ್ನತ ವಿದ್ಯಾರ್ಹತೆ ನಿಗದಿ ಮಾಡಿರುವುದಕ್ಕೆ ಆಯೋಗವು ಆಕ್ಷೇಪ ವ್ಯಕ್ತಪಡಿಸಿದೆ.

ಭೂಮಾಪಕರ ಹುದ್ದೆಗಳು 'ಸಿ' ವೃಂದದ ಹುದ್ದೆಯಾಗಿದ್ದು ರೂ 6250-12000 ವೇತನ ಶ್ರೇಣಿಯನ್ನು ಹೊಂದಿರುತ್ತದೆ.ಹೀಗಾಗಿ ಬಿ.ಇ, ಬಿ.ಟೆಕ್ ಉನ್ನತ ವಿದ್ಯಾರ್ಹತೆ ಎಂದು ಕಂಡುಬರುತ್ತದೆ. ಈ ವಿದ್ಯಾರ್ಹತೆ ನಿಗದಿ ಮಾಡುವುದು ಸೂಕ್ತವಲ್ಲ. ಸಾಮಾನ್ಯ ವಿದ್ಯಾರ್ಹತೆಯನ್ನು ನಿಗದಿ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಆಯೋಗವು ಪತ್ರದಲ್ಲಿ ವ್ಯಕ್ತಪಡಿಸಿತ್ತು.

ಆದರೆ ಈ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ಭೂಮಾಪನ ಇಲಾಖೆಯಿಂದ ಆಯೋಗಕ್ಕೆ ಉತ್ತರ ಬಂದಿಲ್ಲ.ಹೀಗಾಗಿ ಇಲಾಖೆ ಕಳುಹಿಸಿರುವ ಪ್ರಸ್ತಾವವನ್ನು ಆಯೋಗವು ಹಾಗೆಯೇ ಇಟ್ಟುಕೊಂಡಿದ್ದು, ತಿದ್ದುಪಡಿಯಾಗದ ಹೊರತು ಯಥಾವತ್ತಾಗಿ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಒಂದೇ ಹುದ್ದೆಗೆ ಬೇರೆ ಬೇರೆ ವಿದ್ಯಾರ್ಹತೆಯನ್ನು ನಿಗದಿ ಮಾಡಿರುವುದರಿಂದ ಅಂಕಗಳ ಮಾನದಂಡವನ್ನು ನಿಗದಿಪಡಿಸುವುದು ಕಷ್ಟವಾಗುತ್ತದೆ. ಅಲ್ಲದೆ 'ಸಿ' ದರ್ಜೆಯ ಹುದ್ದೆಗೆ ಉನ್ನತ ವಿದ್ಯಾರ್ಹತೆ ಅಗತ್ಯವಿಲ್ಲ ಎಂಬುದು ಆಯೋಗದ ಅಭಿಪ್ರಾಯವಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂಬುದಾಗಿ ಆಯೋಗದ ಅಧ್ಯಕ್ಷ ಗೋನಾಳ ಭೀಮಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಆಡಳಿತದ ಮೇಲೆ ಪರಿಣಾಮ: ನೇಮಕಾತಿ ವಿಳಂಬವಾಗಿರುವುದರಿಂದ ರೈತರ ಭೂಮಿ ಸರ್ವೇ ಕಾರ್ಯಕ್ಕೆ ತೊಂದರೆಯಾಗಿದೆ. ಸರ್ವೆಗಾಗಿ ಅನೇಕ ವರ್ಷಗಳಿಂದ ಲಕ್ಷಾಂತರ ಅರ್ಜಿಗಳು ಕಾಯುತ್ತಾ ಕುಳಿತಿವೆ. ಸಿಬ್ಬಂದಿ ಕೊರತೆ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ದುರಸ್ತಿ (ಸರ್ವೇ) ಕಾರ್ಯ ಸ್ಥಗಿತಗೊಂಡಿದೆ. ದುರಸ್ತಿಯಾಗದ ಹೊರತು ಮಾರಾಟ ಮಾಡಿದ ಆಸ್ತಿ ನೋಂದಣಿಯಾಗುತ್ತಿಲ್ಲ. ಹೀಗಾಗಿ ತೊಂದರೆಯಾಗಿದೆ ಎಂಬುದು ರೈತರ ಅಳಲು.
ಪ್ರತಿಕ್ರಿಯೆಗೆ ನಕಾರ: ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲದ ಬಗ್ಗೆ ಭೂಮಾಪನ ಇಲಾಖೆಯ ಆಯುಕ್ತರಾದ ಜಿ.ಕಲ್ಪನಾ ಅವರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.