Monday, March 21, 2011

ಸರ್ಕಾರಿ ನೌಕರರ ಪಂಚತಾರಾ ತರಬೇತಿ



ಗೋವಾ...,


ಕರ್ನಾಟಕ ಸರ್ಕಾರ...

ವಿಧಾನಸೌಧ....

ಪಂಚತಾರಾ ಹೋಟೆಲು/ರಿಸಾರ್ಟ್ ...

19 ಹೆಂಗಸರು, ಆರು ಪುರುಷರು...,

ಇವೆಲ್ಲಾ ಓದಿದ ಕೂಡಲೇ ನಿಮ್ಮ ಮನಸ್ಸಿಗೆ ಬರುವುದು ಶಾಸಕರ ರೆಸಾರ್ಟ್ ಪ್ರಹಸನ ...



ಬಟ್, ನಿಮ್ಮ ಊಹೆ ತಪ್ಪು....,

ಇದು ಸರ್ಕಾರ ಉರುಳಿಸಲು ಶಾಸಕರು ಮಾಡುತ್ತಿರುವ ಯಾತ್ರೆಯಲ್ಲ.

ಇದು ಸರ್ಕಾರ ನಡೆಸುವುದು ಹೇಗೆ ? ಎಂಬ ಬಗ್ಗೆ ತರಬೇತಿ ಪಡೆಯಲು ಸರ್ಕಾರಿ ನೌಕರರು ಮಾಡುತ್ತಿರುವ ದಂಡಯಾತ್ರೆ.



ತರಬೇತಿ?,

ಅದು ಗೋವಾದಲ್ಲಿ...,

ಅದೂ ರೆಸಾರ್ಟ್ ನಲ್ಲಾ?....

ಅದಕ್ಕಾಗಿ ಪ್ರತಿಯೊಬ್ಬ ನೌಕರನ ಮೇಲೆ ರಾಜ್ಯ ವ್ಯಯಿಸುತ್ತಿರುವ ಮೊತ್ತ ತಲಾ 31,000/-ರೂಪಾಯಿಗಳು,ಅದರ ಮೇಲೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡುತ್ತದೆ!.

ಸರ್ಕಾರಿ ನೌಕರರಿಗೆ ಸರ್ಕಾರ ಏನೂ ಉಪಕಾರಮಾಡುತಿಲ್ಲಾ ಅಂತಾ ಬೊಬ್ಬೆ ಹೊಡೆಯುವ ಕೃತಗ್ನ ಸಂಘಗಳು ಇದರಿಂದ ಎಚ್ಚೆತ್ತುಕೊಂಡು ಸರ್ಕಾರವನ್ನು ಅಭಿನಂದಿಸಬೇಕಾಗಿದೆ.



ಈ ಬಗ್ಗೆ ಸರ್ಕಾರವು ದಿ:10-3-2011 ರಂದು ಆದೇಶ ಸಂಖ್ಯೆ DPAR 20 KOT 2011 ಹೊರಡಿಸಿದೆ.

ಸರ್ಕಾರಿ ನೌಕರರಿಗೆ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಯಾವ ಗಾಂಪನೂ ಹೇಳಬಲ್ಲ.

ಆದರೆ ನೌಕರರಿಗೆ ತರಬೇತಿ ನೀಡಲು ಗೋವಾದ ಪಂಚತಾರ ಹೋಟೆಲ್ ಆಯ್ಕೆಮಾಡಿಕೊಂಡಿರುವುದು ಸೋಜಿಗದ ಸಂಗತಿ. ಯಾಕೆಂದರೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ತರಬೇತಿ ಕೇಂದ್ರಗಳಿವೆ. ಬೆಂಗಳೂರಿನಲ್ಲಿ ಸಚಿವಾಲಯ ತರಬೇತಿ ಸಂಸ್ಥೆ ಇದೆ. ಮೈಸೂರಿನಲ್ಲಿ ರಾಜ್ಯ ಮಟ್ಟದ ಆಡಳಿತ ತರಬೇತಿ ಸಂಸ್ಥೆ ಇದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ತರಬೇತಿ ಶಾಲೆ (ಐ.ಐ.ಎಂ) ಇದೆ.ಹಲವು ವಿಶ್ವವಿದ್ಯಾಲಯಗಳಿವೆ.ಈ ರಾಜ್ಯದೊಳಗೆ ಬೇಡ ಎಂದರೆ ದೇಶದಾದ್ಯಂತ ಯಾವುದೇ ತರಬೇತಿ ಸಂಸ್ಥೆಯೇ ಇಲ್ಲವೇ?,

ಈ ನೌಕರರ ಯೋಗ್ಯತೆಗೆ ಹೋಟೆಲ್ಗಳೇ ಸರಿ ಎಂಬ ಕಾರಣವೇ?, ವಿಧ್ಯಾ ಸಂಸ್ಹೆಗಳಲ್ಲಿ ಹೇಳಿಕೊಡದ, ಹೋಟೆಲ್ನಲ್ಲಿ ಹೇಳಿಕೊಡುವ “ವಿದ್ಯೆ”ಯಾದರೂ ಯಾವುದು?. ಹೋಟೆಲ್ಗಳಲ್ಲೇನು ಚೀಪಾಗಿ (ಕಡಿಮೆ ದರಕ್ಕೆ) ಕಲಿಸಿಕೊಡಲಾಗುತ್ತದೆಯೇ? ಎಂಬ ಪ್ರಶ್ನೆಗಳು ನಮ್ಮ ತಲೆತಿನ್ನತೊಡಗಿದವು.

ಸಮಕಾಲಿನ ಸಮಾಜದ ಸವಾಲುಗಳು ಬಹಳ ಸಂಕೀರ್ಣವಾಗಿರುತ್ತವೆ. ಅದರಲ್ಲೂ ಇಂದಿನ ಆಡಳಿತಗಾರರ ‘ಅವಶ್ಯಕತೆ’ಗಳೇನಿರುತ್ತವೋ ಯಾರಿಗೆ ಗೊತ್ತು?. ಹಳೇ ಸಿಲಬಸ್ಸನ್ನೇ ಇಟ್ಟುಕೊಂಡು ಅದೇ ಹಳೇ ರೀಲು ಸುತ್ತುವ ಸಂಪ್ರದಾಯಿಕ ತರಬೇತಿ ಕೇಂದ್ರಗಳಿಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಲು ನಮ್ಮ ಮಾಡರ್ನ್ ಅಧಿಕಾರಶಾಹಿಗಳಿಗೆ ಇಷ್ಟವಿಲ್ಲ ಅಂತಾ ಅನ್ನಿಸುತ್ತೆ. ಹಳೇ ಸಿಲಬಸ್ಸಲ್ಲೇ “ರಾಜ್ಯಶಾಸ್ತ್ರ” ಓದಿದ ನಮಗೆ ಈ ಬಗ್ಗೆ ತಾಳಲಾರದ ಕುತೂಹಲ. ಪ್ರಶ್ನೆಗಳೇ ಪ್ರಶ್ನೆಗಳು.

ಹೋಟೆಲ್ನಲ್ಲಿ ಏನು ಕಲಿಸುತ್ತಾರೆ?

ಈ ‘ತರಬೇತಿಯ’ ರೂಪು ರೇಷೆಗಳೇನು?,

ಇವರಿಗೆ ಹೊರಗಿಂದ ಬಂದ ಟ್ರೈನರ್ಸ್ ತರಬೇತಿ ನೀಡುತ್ತಾರೋ ಅಥವಾ ಅಲ್ಲಿನ ಸಪ್ಪ್ಲೇಯರ್ ಗಳೇ ಟ್ರೈನಿಂಗ್ ನೀಡುತ್ತಾರೋ?

ಇಲ್ಲಿನ ಕರಿಕ್ಯುಲಂ ಏನು ?

ತಲಾ ಮೂವತ್ತೊಂದು ಸಾವಿರ ಖರ್ಚುಮಾಡಿ ಇವರಿಗೆ ಎಂತಾ ತರಬೇತಿ ನೀಡುತ್ತಾರೆ?

ಇವರು ತರಬೇತಿ ಪಡೆದ ಮೇಲೆ ಅಲ್ಲಿ (ರಿಸಾರ್ಟ್ನಲ್ಲಿ) ಪಡೆದ “ಜ್ಞಾನವನ್ನು”ದೈನಂದಿನ ಆಡಳಿತ ದಲ್ಲಿ ಯಾವ ರೀತಿ ವಿನಿಯೋಗಿಸುತ್ತಾರೆ?.ಇತ್ಯಾದಿ,ಇತ್ಯಾದಿ..

ಸಮಸ್ಯೆ ಹಿಡಿದು ಬರುವ ಜನರ ಕಷ್ಟಗಳನ್ನು ನಿಮಿಷ ಮಾತ್ರದಲ್ಲಿ ಬಗೆಹರಿಸುತ್ತಾರೋ ನೋಡೋಣ ಎಂದುಕೊಂಡು ಅಲ್ಲಿ ಹೋಗಲು ಆಯ್ಕೆ ಆಗಿರುವವರ ಪಟ್ಟಿ ನೋಡಿದರೆ ಅದರಲ್ಲಿರುವವರ್ಯಾರೂ ನೇರವಾಗಿ ಆಡಳಿತ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವವರಲ್ಲ!. ಮುಕ್ಕಾಲು ಭಾಗ ಜನ ಬೆರಳಚ್ಚುಗಾರ್ತಿಯರು,ಇನ್ನುಳಿದವರು ವೃತ್ತಿಜೀವನದ ಸಂಧ್ಯಾಕಾಲದಲ್ಲಿ ಬಡ್ತಿ ಪಡೆದು ಅಧಿಕಾರಿಯಾಗಿರುವ ಜನ. ಇವರೂ ಸಹಾ ಸೇವಾನಿಯಮ,ಅಕೌಂಟ್ಸ್ ಇತ್ಯಾದಿ ಕಡೆ ರೂಟಿನ್ ಗುಮಾಸ್ತಿಕೆ ತರದ ಕೆಲಸ ಮಾಡುವವರೇ!.

ಯಾವ ಮಾನದಂಡವನ್ನು ಉಪಯೋಗಿಸಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ಇನ್ನೂ ನಿಗೂಡವಾಗಿಯೇ ಉಳಿದಿದೆ.’ಮಾನ ಇರುವವರನ್ನು ದಂಡದಿಂದ ಹೊಡೆದೋಡಿಸು’ ಎಂಬ ಫಾರ್ಮುಲಾ ಇಲ್ಲಿ ಉಪಯೋಗಿಸಲಾಗಿದೆ ಎಂದು ಕುಹಕಿಗಳ ಅಂಬೋಣ.

ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಯಾವುದೇ ನೀತಿ ನಿಯಮಗಳಿಲ್ಲದೆ ಆಯ್ಕೆಗಾರರು ಬೇಕು ಬೇಕಾದವರನ್ನು ಬೇಕಾಬಿಟ್ಟಿ ಆಯ್ಕೆ ಮಾಡಿದ್ದಾರೆ ಎಂಬುದು ಕೆಲವರ ಆರೋಪ. ಈ ಗೋವಾ ಯಾತ್ರೆಯಲ್ಲಿ ಸಂಘದ ಪದಾಧಿಕಾರಿಗಳಿಗೂ ಜಾಗ ಸಿಗದೇ ಅವರೂ ಸಹಾ ಚೀರಾಡುತಿದ್ದಾರೆ.(ವಿಷಯ ಇಷ್ಟೆಲ್ಲಾ ಗುಲ್ಲಾಗಲು ಅದೇ ಮುಖ್ಯ ಕಾರಣ).

ಅದೇನೇ ಇರಲಿ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಎದ್ದು ಕಾಣುವ ಎರಡು ಪ್ರಮುಖ ಮಾನದಂಡಗಳೆಂದರೆ “ಜಾತಿ ಮತ್ತು ಲಿಂಗ”.

ಇಲ್ಲಿ ಆಯ್ಕೆಯಾಗಿರುವವರು ಎರಡು ವರ್ಗಕ್ಕೆ ಸೇರಿದವರು.

೧)ಶಾಖಾಧಿಕಾರಿ ವರ್ಗ (ಗ್ರೂಪ್-ಬಿ),

೨)ಶೀಘ್ರಲಿಪಿಗಾರ್ತಿಯರ ವೃಂದ (ಗ್ರೂಪ್ –ಸಿ) .

ಬಹುಷಃ ಗ್ರೂಪ್ –ಬಿ ವೃಂದದ ಸ್ಥಾನಗಳನ್ನು ಪುರುಷರಿಗೆ ಮೀಸಲಿಟ್ಟು ಗ್ರೂಪ್ –ಸಿ ವೃಂದದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ವಿನೂತನ ರೂಸ್ಟೆರ್ ಪದ್ದತಿಯನ್ನು ಆಡಳಿತ ಸುಧಾರಣೆ ಇಲಾಖೆ ಅನುಸರಿಸಿರುವಂತಿದೆ.

ಸಂಘದವರು ಹೇಳುವ ಪ್ರಕಾರ ಈ ಕಾರ್ಯಕ್ರಮಕ್ಕೆ ಗ್ರೂಪ್ –ಸಿ ನೌಕರರನ್ನು ಮಾತ್ರ ನಿಯೋಜಿಸಬೇಕಾಗಿತ್ತೆಂದು ಸರ್ಕಾರದ ಆದೇಶ ಸಂಖ್ಯೆ DPAR 20KOT 2011 ನಲ್ಲಿ ಉಲ್ಲೇಖಿತವಾಗಿರುವ ಕೇಂದ್ರ ಸರ್ಕಾರದ ಪತ್ರದಲ್ಲಿ ಹೇಳಲಾಗಿತ್ತು. ಗ್ರೂಪ್ –ಸಿ ಎಂದರೆ ಕಿರಿಯ ಸಹಾಯಕ/ಕಿ , ಟೈಪಿಸ್ಟ್,ಸಹಾಯಕ/ಕಿ, ಹಿರಿಯ ಸಹಾಯಕಿ/ಕ, ಇವರೆಲ್ಲಾ ಇರುತ್ತಾರೆ. ಇದರಲ್ಲಿ ಎಲ್ಲರನ್ನೂ ಉಪೇಕ್ಷಿಸಿ ಕೇವಲ ಶೀಘ್ರಲಿಪಿಗಾರ್ತಿಯರನ್ನು ಇಷ್ಟು ಶೀಘ್ರವಾಗಿ ಆರಿಸಿ ಕಳುಹಿಸುವ ಅಗತ್ಯವೇನಿತ್ತು ಎಂಬುದು ಸಹಾಯಕರ ಸಂಘದವರ ಪ್ರಶ್ನೆ. ಏನೇ ಆದರೂ ಅವರೂ ಸಹಾ ಗ್ರೂಪ್ –ಸಿ ಆಗಿರುವುದರಿಂದ ಅವರ ಆಯ್ಕೆ ನಿಯಮಾನುಸಾರ ಇದೆ ಎಂಬುವ ಮಾತನ್ನು ಸಂಘದವರು ಮುಖಾ ಕಿವುಚಿ ಒಪ್ಪಿಕೊಳ್ಳುತ್ತಾರೆ.

ಆದರೆ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ತೂರಿಸಿರುವ ಗ್ರೂಪ್-ಬಿ ನ ಅಧಿಕಾರಿಗಳ ಕಿಲಾಡಿತನದ ಬಗ್ಗೆ ಎಲ್ಲರೂ ತಲೆದೂಗಬೇಕಾದದ್ದೇ.ಏಕೆಂದರೆ ಈ ಸಚಿವಾಲಯದಲ್ಲಿ ಸುಮಾರು ಒಂದು-ಒಂದೂವರೇ ಸಾವಿರ ನೌಕರರಿದ್ದಾರೆ.ಅದರಲ್ಲಿ ಎಲ್ಲರನ್ನೂ ಹಿಂದೆಹಾಕಿ, ನಿಯಮಗಳನ್ನು ಮುರಿದು ಈ ಸ್ವರ್ಗರೋಹಣಕ್ಕೆ ಹೋಗಿರುವ ಅಧಿಕಾರಿಗಳ ಸಾಧನೆ ಮಹತ್ವದ್ದು. ಆದುದರಿಂದ ಇಂತಹಾ ‘ಅರ್ಹರ’ಬಗ್ಗೆ ಒಂದಿಷ್ಟು ತಿಳಿದು ಪಾವನರಾಗೋಣ.ಏಕೆಂದರೆ ‘ಫಾಲ್ಲೋ ದಿ ಲೀಡರ್’ ಎಂಬ ನಾಣ್ನುಡಿಯಂತೆ ಗೆದ್ದವರ ಉದಾಹರಣೆ ಎಲ್ಲರಿಗೂ ಆದರ್ಶ ಪ್ರಾಯವಲ್ಲವೇ!. ಈ ಮಹಾನುಭಾವರು ಈ ಸಾವಿರ ಜನರಲ್ಲಿ ಇರದ ಯಾವ ವಿಶೇಷತೆ ಹೊಂದಿದ್ದಾರೆ ಎಂದು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ ಇರಬಹುದು.
(to be continued)

(ಚಿತ್ರದಲ್ಲಿ )ಅಧಿಕಾರಿಗಳು ತರಬೇತಿ ಪಡೆಯುತ್ತಿರುವ ವೈಖರಿ ....


                                             





Friday, March 18, 2011

Thursday, March 17, 2011

FD01SRA2011 Dt:05-03-2011

FD 01 SRA 2011 Dt:05-03-2011