Thursday, August 12, 2010

ನಾಗರಿಕ ಸೇವಾ ನಿಯಮ ತಿದ್ದುಪಡಿಗೆ ಒತ್ತಾಯ

http://mail.prajavani.net/Content/Mar192010/bangalore20100319175473.asp


ಪ್ರಜಾವಾಣಿ ವಾರ್ತೆ
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಇಲಾಖಾ ಮುಖ್ಯಸ್ಥರಿಗೆ ನೀಡುವ ವಾರ್ಷಿಕ ಆಸ್ತಿ ವಿವರದ ಪ್ರತಿಯನ್ನು ಕಡ್ಡಾಯವಾಗಿ ಲೋಕಾಉುಕ್ತಕ್ಕೆ ಸಲ್ಲಿಸಬೇಕೆಂದು ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು- ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ


ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಇಲಾಖಾ ಮುಖ್ಯಸ್ಥರಿಗೆ ನೀಡುವ ವಾರ್ಷಿಕ ಆಸ್ತಿ ವಿವರದ ಪ್ರತಿಯನ್ನು ಕಡ್ಡಾಯವಾಗಿ ಲೋಕಾಉುಕ್ತಕ್ಕೆ ಸಲ್ಲಿಸಬೇಕೆಂದು ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಗುರುವಾರ ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಂಕಿತ ಅಧಿಕಾರಿಗಳ ಆಸ್ತಿ ವಿವರದ ಪ್ರಮಾಣ ಪತ್ರವನ್ನು ಪಡೆಯುವಾಗ ಅವರಿಗೆ ಸುಳಿವು ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಮಗೆ ನೇರವಾಗಿ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕೆಂಬ ನಿಯಮ ರೂಪಿಸುವಂತೆ ಕೋರಲಾಗುವುದು’ ಎಂದರು.

‘ಈ ಬಾರಿ ದಾಳಿಗೆ ಒಳಗಾದ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರ ಆಸ್ತಿ ವಿವರದ ಪ್ರಮಾಣ ಪತ್ರ ಪಡೆಯಲು ನಮಗೆ ಸಾಧ್ಯವೇ ಆಗಿಲ್ಲ. ಇಲಾಖೆಯ ಮುಖ್ಯಸ್ಥರಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದ ತಕ್ಷಣವೇ, ಸಂಬಂಧಿಸಿದ ಅಧಿಕಾರಿಗೆ ಮಾಹಿತಿ ದೊರೆಯುತ್ತಿದೆ. ಇದನ್ನು ತಡೆಯಲು ಕಾನೂನು ತಿದ್ದುಪಡಿಯಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

‘ನಾವು ತನಿಖೆ ನಡೆಸುವ ಸಂದರ್ಭದಲ್ಲಿ ಪದೇ ಪದೇ ಸರ್ಕಾರಿ ಅಧಿಕಾರಿಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಭ್ರಷ್ಟರಿಗೆ ಅನುಕೂಲವಾಗುತ್ತದೆ. ಸರ್ಕಾರವೇ ಇಂತಹ ಪರಿಸ್ಥಿತಿಗೆ ಕಾರಣವಾದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ನಡೆಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಉತ್ತರ ದೊರಕಿಲ್ಲ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರೂ ಶಾಸಕರಂತೆ ಲೋಕಾಯುಕ್ತಕ್ಕೆ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕೆಂದು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಎರಡೂವರೆ ತಿಂಗಳಾದರೂ ಉತ್ತರ ಬಂದಿಲ್ಲ.

 ಪ್ರಸ್ತಾವವನ್ನು ಪರಿಶೀಲಿಸುವ ಭರವಸೆ ನೀಡಿದ ಸರ್ಕಾರ, ನಂತರ ಆ ವಿಷಯವನ್ನು ಮರೆತುಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.