Monday, August 1, 2011

ಹಿಂದೂ ವಿವಾಹ ನೊಂದಣಿ ಅಧಿಕಾರಿ ನೇಮಕಾತಿ ಯಾಕಿಲ್ಲ?



ವಿವಾಹ ನೋಂದಣಿಯನ್ನು ಇತ್ತೀಚಿನ ದಿನಗಳಲ್ಲಿ ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ವಿದೇಶಕ್ಕೆ ಹೋಗುವ ದಂಪತಿಗಳಿಗೆ ಸೀಮಿತವಾಗಿದ್ದ ಈ ನೋಂದಣಿ ಈಗ ಇತರ ಮದುವೆಯ ಸಂದರ್ಭಗಳಲ್ಲಿ ಕೂಡ ಅನುಸರಿಸಲಾಗುತ್ತಿದೆ. ವಿವಾಹವನ್ನು ಅಧಿಕೃತಗೊಳಿಸುವ ಕಾನೂನುಬದ್ಧ ಕ್ರಮವೇ ಈ ವಿವಾಹ ನೊಂದಣಿ.
ಹಿಂದೂ, ಮುಸ್ಲಿ ಮತ್ತು ಕ್ರೈಸ್ತ ಧರ್ಮಗಳಲ್ಲಿನ ನಿಯಮಗಳು ಆಯಾ ಧರ್ಮಕ್ಕನುಗುಣವಾಗಿದೆ. ಇದನ್ನು ಅನುಸರಿಸಿ, ಮುಸ್ಲಿಂ ವಿವಾಹಗಳ ನೋಂದಣಿ ಅಧಿಕಾರವನ್ನು ಆಯಾ ಮಸೀದಿಗಳಿಗೆ ನೀಡಲಾಗಿದೆ. ಅದೇ ರೀತಿ ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿಗಾಗಿ ನೋಟರಿಗಳಲ್ಲಿ ಅವಕಾಶವಿದೆ ಮತ್ತು ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ಕ್ರೈಸ್ತ ಧರ್ಮಕ್ಕೆ ಸೇರಿದ ನ್ಯಾಯವಾದಿ ನೋಟರಿಗಳ ನೇಮಕಾತಿಯನ್ನು ಸರಕಾರ ಮಾಡಿದೆ.
ಆದರೆ ಹಿಂದೂ ವಿವಾಹ ನೋಂದಣಿಯನ್ನು ಉಪ ನೋಂದಣಿ ಕಚೇರಿಗಳಲ್ಲಿ ಮಾಡಬೇಕಾಗಿದೆ. ಹಿಂದೂ ವಿವಾಹ ನೋಂದಣಿಯನ್ನು ನೋಟರಿಯವರ ಬಳಿ ಮಾಡಿಕೊಳ್ಳುವ ಕಾನೂನು ಇಲ್ಲಿ ಇಲ್ಲ. ಈ ಕಾರಣದಿಂದಾಗಿ ವಿವಾಹ ನೋಂದಣಿಗಾಗಿ ಹಿಂದೂ ಧರ್ಮೀಯರು ಉಪ ನೋಂದಣಿ ಕಚೇರಿಗೆ ಅಲೆದಾಡುವ, ತಾಸುಗಟ್ಟಲೆ ಸರದಿಯ ಸಾಲಲ್ಲಿ ಕಾಯುವ ಪ್ರಮೇಯವನ್ನು ಎದುರಿಸಬೇಕಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಧರ್ಮೀಯರಿಗೆ ವಿವಾಹ ನೋಂದಣಿ ಸಂದರ್ಭದಲ್ಲಿ ಈ ತಾಪತ್ರಯವಿರುವುದಿಲ್ಲ.
ನೇಮಕಾತಿ ಸಾಧ್ಯ
ಹಿಂದೂ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ನೋಟರಿ ವಕೀರನ್ನು ನೇಮಕಗೊಳಿಸಲು ಯಾವುದೇ ಹೆಚ್ಚಿನ ಕಾನೂನು ತೊಡಕುಗಳಿಲ್ಲ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 5ಕ್ಕೆ ಸೂಕ್ತ ತಿದ್ದುಪಡಿ ತಂದು ವಿವಾಹ ನೋಂದಣಿ ನಿಯಮಾವಳಿಗಳನ್ನು ಜಾರಿಗೆ ತಂದಲ್ಲಿ ಹಿಂದೂ ವಿವಾಹ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ.
ಹಿಂದೂ ವಿವಾಹ ನೋಂದಣಿ ಅಧಿಕಾರಿ ನೇಮಕ ಮತ್ತು ವಿವಾಹ ಕಾಯಿದೆಯ ಸೆ. 5ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ, ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತ ಡಿ.ಕೆ. ಭಟ್‌ ಅವರು ಕಳೆದ 5 ವರ್ಷಗಳಿಂದ ಸರಕಾರಕ್ಕೆ ಕನಿಷ್ಠ 70 ಪತ್ರಗಳನ್ನು ಬರೆದಿದ್ದಾರೆ. ಶಾಸಕರು ಮತ್ತು ಸಚಿವರುಗಳ ಮೂಲಕ ಒತ್ತಡ ತರುವಂತೆ ಪ್ರಯತ್ನ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ವಿವಾಹವಾದ ಸಭಾಮಂಟಪ ಅಥವಾ ಸ್ಥಳದ ಮುಖ್ಯಸ್ತರ ಪತ್ರ, ಪುರೋಹಿತರ ಧೃಢೀಕರಣ ಪತ್ರ ಮತ್ತು ಎರಡೂ ಕಡೆಯವರ ಹೆತ್ತವರ ಒಪ್ಪಿಗೆ ಪತ್ರಗಳನ್ನು ಅರ್ಜಿಯೊಂದಿಗೆ ಹಾಜರುಪಡಿಸಿ ವಿವಾಹ ನೋಂದಣಾಧಿಕಾರಿಗಳಲ್ಲಿ ಸರಳವಾಗಿ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಸೆಕ್ಷನ್‌ 5ಕ್ಕೆ ತಿದ್ದುಪಡಿ ತಂದಲ್ಲಿ ಸುಲಭ ಸಾಧ್ಯ ಎಂದು ಡಿ.ಕೆ. ಭಟ್‌ ಅಭಿಪ್ರಾಯಪಡುತ್ತಾರೆ. ಆದರೆ ಈ ವಿಚಾರದ ಕುರಿತಂತೆ ರಾಜ್ಯ ಸರಕಾರವು ಇಲ್ಲಿಯ ತನಕ ಯಾವುದೇ ಆಸಕ್ತಿ ತೋರ್ಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಎಲ್ಲ ಉಪ ನೊಂದಣಿ ಕಚೇರಿಗಳಲ್ಲೂ ಕೆಲಸದ ಒತ್ತಡಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ನ್ಯಾಯವಾದಿ ನೋಟರಿಗಳನ್ನು ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಅನಿವಾರ್ಯ ಹೆಚ್ಚಿದೆ. ಕಾನೂನುಬದ್ಧ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ಅನುಷ್ಠಾನಮಾಡಿದರೆ ಅನಗತ್ಯ ಅಲೆದಾಟ ತಪ್ಪಿದಂತಾಗುತ್ತದೆ. ರಾಜ್ಯ ಸರಕಾರ ಇನ್ನಾದರೂ ಇಂತಹ ಕ್ರಮಗಳಿಗೆ ಮುಂದಾಗಬಹುದು ಎಂದು ಡಿ.ಕೆ. ಭಟ್‌ ಆಶಯ ವ್ಯಕ್ತಪಡಿಸಿದ್ದಾರೆ 

No comments:

Post a Comment