Thursday, January 19, 2017
Saturday, January 7, 2017
ಕರ್ನಾಟಕ ಸರ್ಕಾರ –ಕಚೇರಿ ತೊರೆಯಲೋಲ್ಲದ ಪ್ರೇತಾತ್ಮಗಳು !!
ಹೋದಿಯಾ ಪಿಶಾಚಿ ಅಂದ್ರೆ ಬಂದೆ ಬಂದೆ ಗವಾಕ್ಷಿಲಿ”ಎಂಬ ಗಾದೆ ಇದೆ.ಅದನ್ನು ನಮ್ಮ ನಿವೃತ್ತ ಸರ್ಕಾರಿ ನೌಕರರನ್ನು ನೋಡೇ ಮಾಡಿರಬೇಕು ?,ಯಾಕ್ರಪ್ಪಾ,ಪೆನ್ಷನ್ನು,ಪೆನ್ಷನ್ನು ಅಂತಾ ಬಡ್ಕೊತೀರಿ,ಪೆನ್ಷನ್ ಇದ್ದವರು ರೀಅಪಾಯಿಂಟ್ ಗೋಸ್ಕರ ಎಷ್ಟು ತಿಣುಕ್ತಿದ್ದಾರೆ ನೋಡಿ ಅಂತಾ ನಿವೃತ್ತಿ ಹೊಸ್ತಿಲಲ್ಲಿರೋ ಕೆಲವರತ್ತ ಬೆರಳು ತೋರಿಸ್ತಾರೆ.
ಹೋಗ್ಲಿ ಬಿಡಿ ,ಅವರ ಹೊಟ್ಟೆಪಾಡಿಗೆ ಯಾಕೆ ಕಲ್ಲು ಹಾಕೋದು?,ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿಬೇಡಿ,ಬದುಕ್ಕೊಳ್ಳಿ ಅನ್ಬಹುದು.ಆದರೆ ಸರ್ಕಾರ ಯಾರೋ ಬಡ ಸಿ ಗ್ರೂಪ್ ನೌಕರ ಬದುಕ್ಕೊಳ್ಳಿ ಅಂತಾ ಯಾವಾಗಲೂ ರೀಅಪಾಯಿಂಟ್ ಮಾಡಿಲ್ಲ. ಇವರೆಲ್ಲಾ ಒಳ್ಳೆಯ ಸಂಬಳ ಗಳಿಸುತ್ತಿದ್ದ ಅಧಿಕಾರಿಗಳೇ .ದುಡಿಯ ಬಲ್ಲವರು ಎಲ್ಲೂ ಬೇರೆ ಕಡೆ ಕೆಲಸ ಹುಡುಕ್ಕೊಳ್ತಾರೆ,ಆದರೆ ಬೇತಾಳವನ್ನು ವಿಕ್ರಮಾದಿತ್ಯ ಎಷ್ಟು ದೂರ ತಗೊಂಡು ಹೋದರೂ ಆ ಬೇತಾಳ ಮತ್ತೆ ಬಂದು ಅದೇ ಸ್ಮಶಾನದ ಮರಕ್ಕೆ ಜೋತು ಬೀಳುವಂತೆ ಕೆಲವರು ಎಲ್ಲಿ ನಿವೃತ್ತಿ ಹೊಂದಿರುತ್ತಾರೋ ಅದೇ ಆಫೀಸಿಗೆ ಆಟಕಾಯಿಸಿ ಕೊಳ್ತಾರೆ. ತಮಾಷೆಎಂದರೆ ಈ ಕಡೆ ತಮ್ಮ ರೀ ಅಪಾಯಿಂಟ್ ಫೈಲ್ ಫಾಲ್ಲೋ ಅಪ್ ಮಾಡ್ತಾನೇ ನಿವೃತ್ತಿಯ ದಿನ ಶಾಲು,ಹಾರ,ತುರಾಯಿ ಎಲ್ಲಾ ಸ್ವೀಕರಿಸುತ್ತಾರೆ .ಬಿಟ್ಟಿ ಸಿಗೊದನ್ನು ಯಾಕೆ ಬಿಡೋದು ಅಂತಾ . ಉದ್ದುದ್ದಾ ಭಾಷಣ ಮಾಡುವುದನ್ನು ನೋಡಿದರೆ ಹೆಂಡತಿ ಮಕ್ಕಳನ್ನು ತೊರೆದು ಕಾಡಿಗೆ ಹೊರಟ ಸಿದ್ದಾರ್ಥನಿಗಿಂತಾ ಒಂದು ಸ್ಟೆಪ್ ಮೇಲೇ ಅಂತಾ ಅನ್ಕೋಬೇಕು!...ಪ್ರಾಣಿ, ಮುರುದಿನವೇ ಕಚೇರಿಗೆ ಹಾಜರ್ .
ರೀಅಪಾಯಿಂಟ್ ಆಗಲ್ರಿ ಅದು ಸರ್ಕಾರದ ನೀತಿ ಅಲ್ಲ ಅಂದ್ರೆ ಕನ್ಸಲ್ಟೆಂಟ್ ಆಗಿ ಬರ್ತೀನಿ ಸಾರ್ ಅಂತಾರೆ !!!
ಒಂದಿಷ್ಟು ಸಂಬಳ ಹೆಚ್ಚು ಮಾಡಿ ಅಂದರೆ ಒಲ್ಲೆ ಎನ್ನುವ ಸರ್ಕಾರ ಈ ದಂಡಪಿಂಡಗಳಿಗೆ ಕೋಟ್ಯಂತರ ವೆಚ್ಚ ಮಾಡುತ್ತೆ .ಸಂಬಳ ,ಗೌರವ(?)ಧನ ಮಾತ್ರವಲ್ಲದೆ ಸಾರಿಗೆ ಸೌಲಭ್ಯ ಕೂಡ ಮಂಜೂರು ಮಾಡಿಸಿಕೊಂಡು ಬಿಟ್ಟಿರುತ್ತವೆ !. ಈ ಖರ್ಚಲ್ಲಿ ನೂರಾರು ಜನ ಡೇಟಾ ಎಂಟ್ರಿ ಅಪರೇಟರ್ ಗಳಿಗೆ ,ಹೋಂ ಗಾರ್ಡ್ ಗಳಿಗೆ ಸಂಬಳ ಕೊಡಬಹುದು .ಆದರೆ ಕೆಲವು ಐ ಎ ಎಸ್ ಅಧಿಕಾರಿಗಳು ನಮ್ಮಲ್ಲಿ ಹ್ಯಾಂಡ್ ಇಲ್ಲಾ,ಹ್ಯಾಂಡ್ ಇಲ್ಲಾ ಅನ್ನುತ್ತಾರೆ ಆದರೆ ಸಾದಿಲ್ವಾರು ವೆಚ್ಚದಲ್ಲಿ ಕನ್ಸಲ್ಟೆಂಟ್ಗಳನ್ನು ನೇಮಿಸುವುದನ್ನು ನೋಡಿದ್ರೆ ನಾವು ಇವರಿಗೆ ಬ್ರೈನ್ ಇಲ್ಲ,ಬ್ರೈನ್ ಇಲ್ಲ ಅಂದ್ಕೊಬೇಕಷ್ಟೇ .
ಸರ್ಕಾರದ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ನೇಮಕಾತಿಗಳನ್ನು ನಡೆಸುವ ಬಗ್ಗೆ ಸಂವಿಧಾನದಲ್ಲೇ ಭಾಗ -೧೪ ರಲ್ಲಿ ಒಂದು ದಿಕ್ಕುತೋರಿಸಿದರೂ ಸರ್ಕಾರವು ನೀತಿ ನಿಯಮ ರೂಪಿಸಿದರೂ,ಕಾಲಕಾಲಕ್ಕೆ ನ್ಯಾಯಾಲಯಗಳು ಸಂವಿಧಾನ ಬದ್ದ ನೀತಿ ನಿಯಮಾನುಸಾರ ನೇಮಕಾತಿ ಮಾಡುವ ಅಗತ್ಯವನ್ನು ಎತ್ತಿ ಹೇಳಿದರೂ ಅದನ್ನೆಲ್ಲಾ ಗಾಳಿಗೆ ತೂರಿ ಏನಾದರೂ ವಾಮಮಾರ್ಗ ಹುಡುಕಿ ಹಳೆಯ ಕಚೇರಿಗೆ ಅಂಟಿಕೊಳ್ಳುತ್ತಾರೆ .ಬಜೆಟ್ ನಲ್ಲಿ ಇವರಿಗೆ ನೀಡಿದ ಖರ್ಚನ್ನು ಕೂಡ “ಅಡಳಿತ ವೆಚ್ಚ”ಎಂದೆ ತೋರಿಸುತ್ತಾರೆ .ಇವರ ಭತ್ಯೆ ,ಕಾರು-ಬಾರು ಎಲ್ಲವೂ ಇತರ ನೌಕರರ ತಲೆ-ಮೇಲೆ.ಅಡಳಿತ ವೆಚ್ಚ ವಿಪರೀತ ಅದಾಗ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲು ಅಥವಾ ಸಂಬಳ ಹೆಚ್ಚಿಸಲು ಮೀನಾ ಮೇಷ ಎಣಿಸುತ್ತವೆ. ಇತ್ತ ಪೆನ್ಷನ್ ನೀಡುವ ಪದ್ಧತಿ ರದ್ದಾಗಲು ಅದೇ ಕಾರಣ. ನೇಮಕಾತಿ ಮಾಡಬೇಕು ಅಂದರೆ ರೂಸ್ಟರ್ ಅನುಸರಿಸಬೇಕು,ಮೀಸಲಾತಿ ಮತ್ತಿತರ ನಿಯಮ ಪಾಲಿಸಬೇಕು ,ಬಕೆಟ್ ಹಿಡಿಯುವವರನ್ನು,ಸ್ವಜಾತಿ ಬಾಂಧವರನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಇದರಿಂದ ಸರ್ಕಾರದ ಮೀಸಲಾತಿ ನಿಯಮ ಪಾಲನೆ ಆಗದೆ ಅಸಮತೋಲನ ಉಂಟಾದರೂ ದಲಿತ ಸಂಘಟನೆಗಳು ಚಕಾರವೆತ್ತುತಿಲ್ಲ.ಅದಕ್ಕೆ ಮೇಲಿನ ಹಂತದಲ್ಲಿ ಕಚೇರಿಗಳಲ್ಲಿ ಪ್ರಧಾನ ಕಾರ್ಯದರ್ಶಿಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು,CEO ಗಳು ರಿಟೈರ್ ಅಗುವವನನ್ನೇ ಇಟ್ಟು ಕೊಳ್ಳಲು ಇಷ್ಟ ಪಡ್ತಾರೆ .”ಅನ್ನ ಹಳಸಿರುತ್ತೆ ,ನಾಯಿ ಹಸಿದಿರುತ್ತೆ ,ವಾಮಮಾರ್ಗಗಳು ಬೇಕಾದಷ್ಟು ತೆರೆದುಕೊಂಡಿರುತ್ವೆ .”ಇವನ ಸೇವೆ ಅತಿ ಮುಖ್ಯ ,ಇವನು ಕೇಂದ್ರ ಸರ್ಕಾರದ ಜೊತೆ ಚೆನ್ನಾಗಿ ‘ವ್ಯವಹಾರ’ ಮಾಡ್ತಾನೆ ,ಪ್ರಮುಖ ಪ್ರಾಜೆಕ್ಟ್ ಗಳು ಬಾಕಿ ಇದೆ, ಚುನಾವಣೆ ಇದೆ....ಇತ್ಯಾದಿ ...ಇತ್ಯಾದಿ ಕಾರಣ ಹೇಳಿ ಕೆ.ಟಿ.ಪಿ.ಪಿ ನಿಯಮದಡಿ 4ಜಿ ಅಡಿ ವಿನಾಯಿತಿ ಪಡೆದು ಮುಂದುವರೆಸುತ್ತಾರೆ .ಈ 4G ಅನ್ನೋದು ಆ 4Gಸ್ಪೆಕ್ಟ್ರಂ ಗಿಂತಾ ದೊಡ್ಡ ಹಗರಣ ಈ ರೀತಿ ಕನ್ಸಲ್ಟೆಂಟ್ ಗಳಿಗೆ ದಂಡ ಮಾಡಿದ ವೆಚ್ಚದ ಬಗ್ಗೆ ಆರ್ಥಿಕ ಇಲಾಖೆಯ ಸಂಗ್ರಹಣಾ ಕೋಶದಲ್ಲಿ ವಿಚಾರಿಸಿ ನೋಡಿ . .
ಹಾಗೆ ,ಕಚೇರಿಗೆ ಬರುವ ಇವರು ತಾವು ಹಿಂದೆ ಸೇವಾವಧಿಯಲಿ ಮಾಡಿದ್ದ ಯಾವುದಾದರು ಹಗರಣ ಹೊರಗೆ ಬರುತ್ತಾ? ನಮ್ಮ ಹಳೇ ಗಿರಾಕಿಗಳಿಗೆ ಬಿಲ್ಲುಗಳು ಸರಿಯಾಗಿ ಸಂದಾಯ ಆಗ್ತಾ ಇದೆಯಾ ?ಏನಾದರೂ ಹೊಸ ಗೋಲ್ಮಾಲ್ ಮಾಡಬಹುದಾ ಎಂದೆಲ್ಲಾ ಲೆಕ್ಕ ಹಾಕುತ್ತಾ, ಕೆಲಸ ಮಾಡುವವರಿಗೆ ಕಿರುಕುಳ ಕೊಡುತ್ತಾ ಕಾಲ ತಳ್ತಾರೆ,ಸಾಯೋವರೆಗೆ .ಇವರಿಗೆ ನಡತೆ ,ನಡತೆ ನಿಯಮಗಳು ಯಾವುದು ಕೂಡ ಅಪ್ಲೈ ಅಗೋದಿಲ್ವಲ್ಲಾ . ಇಂತವರ್ಯರೂ ನಿಮ್ಮ ಕಚೇರಿಗೂ ಗಂಟು ಬಿದ್ದಿದ್ದಾರೋ?,ಯಾಕೆಂದ್ರೆ ,ಏಕ್ ಗಂಧೀ ಮಚಲಿ ಸಾರೀ ತಲಾಬ್ ಕೋ ಗಂಧಿ ಕರ್ ದೇತಿ ಹೈ ----ಕರ್ಮಕಾಂಡ !
Subscribe to:
Posts (Atom)