Monday, September 6, 2010

ಬಗೆದಷ್ಟೂ ಸಿಗುವ ಅಕ್ರಮಗಳ ಸರಮಾಲೆ (prajavani sept 6,2010)

Prajavani Sept 6, 2010


ಬಗೆದಷ್ಟೂ ಸಿಗುವ ಅಕ್ರಮಗಳ ಸರಮಾಲೆ

ರವೀಂದ್ರ ಭಟ್ಟ



ಇಲ್ಲಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಅಕ್ರಮಗಳ ಸರಮಾಲೆ ಒಳಹೊಕ್ಕು ನೋಡಿದರೆ ಸಿಗುತ್ತಲೇ ಇವೆ.


ಮೈಸೂರು: 2007ರ ಮಾರ್ಚ್ 15 ಮತ್ತು 16ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಸಿದ ಸಂದರ್ಶನಕ್ಕೆ ಹಾಜರಾದವರ ಸಂಖ್ಯೆ 64. ಇದರಲ್ಲಿ 47 ಅಭ್ಯರ್ಥಿಗಳನ್ನು ಕನಿಷ್ಠ 3 ವರ್ಷದ ಬೋಧನಾ ಅನುಭವ ಇಲ್ಲ ಎಂಬ ಕಾರಣಕ್ಕೆ ಅನರ್ಹಗೊಳಿಸಲಾಗಿದೆ.

ಆದರೆ ಫಿಸಿಯಾಲಜಿ ವಿಭಾಗಕ್ಕೆ ಯಾವುದೇ ಬೋಧನಾನುಭವ ಇಲ್ಲದ ಡಾ.ಕೆ.ಕೆ.ಕಸ್ತೂರಿ, ಕೇವಲ ಒಂದು ವರ್ಷ ಮಾತ್ರ ಅನುಭವ ಇರುವ ಡಾ.ಸೀಮಾ ದೀಪಕ್ ಅವರನ್ನು ಅನಾಟಮಿ ವಿಭಾಗಕ್ಕೆ ಹಾಗೂ ಕೇವಲ 2 ವರ್ಷ ಅನುಭವ ಇರುವ ಡಾ.ಬಿ.ಎನ್.ನಂದೀಶ್ ಅವರನ್ನು ಪೆಥಾಲಜಿ ವಿಭಾಗಕ್ಕೆ ನೇಮಕಾತಿ ನೀಡಲಾಗಿದೆ.

2008ರ ಜೂನ್ 25ರಂದು ನಡೆದ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಟ್ಟು ಆಯ್ಕೆಯಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಮೈಕ್ರೋಬಯಾಲಜಿ ವಿಭಾಗದಲ್ಲಿ ಡಾ.ಮೈತ್ರಿ ಆಯ್ಕೆಯಾಗಿದ್ದರೆ ಯಾವುದೇ ಬೋಧನಾ ಅನುಭವ ಇಲ್ಲದ ಡಾ. ಎಸ್.ದೀಪ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಅದೇ ರೀತಿ ಅನಾಟಮಿ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಡಾ.ಸುಮತಿ ಎಸ್ ಅವರು ಸಂದರ್ಶನದಲ್ಲಿ ಆಯ್ಕೆಯಾಗಿದ್ದರೂ ಅವರ ಬದಲು ಕೇವಲ ಒಂದು ವರ್ಷ 6 ತಿಂಗಳ ಅನುಭವ ಇರುವ ಡಾ.ಗೀತಾಂಜಲಿ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ.


ಸಂದರ್ಶನದಲ್ಲಿ ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಬಂದ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. 2007ರ ಮಾರ್ಚ್ 15ರಂದು ನಡೆದ ಸಂದರ್ಶನದಲ್ಲಿ ಬಯೋಕೆಮಿಸ್ಟ್ರಿ ವಿಭಾಗಕ್ಕೆ ಆಯ್ಕೆಯಾದ ಡಾ.ಮೀರಾ ಎಸ್ ಅವರು ಒಂದು ವರ್ಷ 6 ತಿಂಗಳ ನಂತರ ಕೆಲಸಕ್ಕೆ ಹಾಜರಾಗಿದ್ದಾರೆ.

ಫಿಸಿಯಾಲಜಿ ವಿಭಾಗದ ಡಾ.ತೇಜಸ್ವಿನಿ ಕೂಡ ಒಂದೂವರೆ ವರ್ಷದ ನಂತರ ಹಾಗೂ ಡಾ.ಪೂರ್ಣಿಮಾ ಬಿ.ಸಿ. ಅವರು ಒಂದು ವರ್ಷ ನಾಲ್ಕು ತಿಂಗಳ ನಂತರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇನ್ನೂ ಅದ್ಭುತ ಎಂದರೆ ಕೆಲವು ವಿಭಾಗಗಳಿಗೆ ನೇರ ನೇಮಕಾತಿಗೆ ಪ್ರಕಟಣೆ ಹೊರಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರೋಗಲಕ್ಷಣ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರ ಎರಡು ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆದರೆ ಡಾ.ಶಿಲ್ಪ, ಡಾ.ಶರತ್ ಮತ್ತು ಡಾ.ರಮೇಶ್ ಎಂಬ ಮೂವರಿಗೆ ನೇಮಕಾತಿ ನೀಡಲಾಗಿದೆ. ಅದೇ ರೀತಿ ಒಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಕರೆದು ಡಾ.ಸುಮನ, ಡಾ.ವಿದ್ಯಾ ವಾಸುದೇವ, ಡಾ.ಅದಿಲ್ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ.

ಅಭ್ಯರ್ಥಿಗಳ ವಿದ್ಯಾರ್ಹತೆ ಪ್ರಮಾಣ ಪತ್ರ, ಪೂರ್ವವೃತ್ತ ಸಿಂಧುತ್ವ ಪ್ರಮಾಣಪತ್ರಗಳ ಪರಿಶೀಲನೆ ಮಾಡದೆ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ. ಇದು ನಮಗೆ ಸಿಕ್ಕಿದ್ದು. ಒಳಹೊಕ್ಕು ನೋಡಿದರೆ ಸಿಗೋದು ಇನ್ನೆಷ್ಟೋ?

No comments:

Post a Comment