Monday, September 6, 2010

ಮೈಸೂರು ವೈದ್ಯಕೀಯ ಕಾಲೇಜು ಬೋಧಕ ಸಿಬ್ಬಂದಿ ನೇಮಕದಲ್ಲೂ ಅಕ್ರಮ

ಪ್ರಜಾವಾಣಿ ವಾರ್ತೆ,ಭಾನುವಾರ , ಅಗಸ್ಟ್ 29, 2010
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ.


ಮೈಸೂರು: ಬೋಧಕೇತರ ಹುದ್ದೆಗಳ ಅಕ್ರಮ ನೇಮಕಾತಿ ನಡೆದಿದೆ ಎಂದು ವಿವಾದಕ್ಕೀಡಾಗಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಮತ್ತು ಅಧಿಕಾರಿಗಳ ಪರಿಷತ್ ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದುಕೊಂಡ ದಾಖಲೆಗಳ ಪ್ರಕಾರ 2007ರಿಂದ 2010ರ ವೇಳೆಯಲ್ಲಿ ನೇಮಕ ಮಾಡಿಕೊಳ್ಳಲಾದ 140 ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಖಚಿತವಾಗಿದೆ. ಪರಿಷತ್‌ನ ಅಧ್ಯಕ್ಷ ಶಾಂತರಾಜು ಮತ್ತು ಕಾರ್ಯದರ್ಶಿ ಚಿಕ್ಕಂದಾನಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ದಾಖಲೆಗಳನ್ನು ಬಹಿರಂಗಪಡಿಸಿದರು.

ತಾತ್ಕಾಲಿಕ ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದ್ದರೂ ನಿಯಮ ಉಲ್ಲಂಘಿಸಿ ನೇರ ನೇಮಕಾತಿಯ ಮೂಲಕ ಕಾಯಂ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿ 3 ವರ್ಷ ಕಳೆದರೂ ಇನ್ನೂ ನೇಮಕಾತಿ ಸಂಬಂಧ ನಿಯಮಾವಳಿ ರೂಪಿಸಿಲ್ಲ. ಅಲ್ಲದೆ ಸ್ವಾಯತ್ತ ಸಂಸ್ಥೆ ನೋಂದಣಿಯನ್ನೂ ನವೀಕರಿಸಿಲ್ಲ.

ನೇಮಕಾತಿ ಮಾಡಿಕೊಳ್ಳುವಾಗ ಸರ್ಕಾರದ ಅನುಮತಿಯನ್ನು ಪಡೆಯದೆ ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಗೌರ್ನಿಂಗ್ ಕೌನ್ಸಿಲ್ ಸಭೆಯ ನಿರ್ಧಾರವನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನೂ ವಿಚಿತ್ರ ಎಂದರೆ ನೇರ ನೇಮಕಾತಿಗೆ ಹಾಜರಾಗದ ಅಭ್ಯರ್ಥಿಯೊಬ್ಬರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ.

ಡಾ.ಉಮಾರಾಣಿ ಅವರು ಮೈಸೂರು ಕಲ್ಯಾಣಗಿರಿಯ ಕೇಂದ್ರ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿದ್ದು ನೇರ ಸಂದರ್ಶನ ನಡೆದ 2007ರ ಮಾರ್ಚ್ 15 ಮತ್ತು 16ರಂದು ಅವರು ಕಲ್ಯಾಣಗಿರಿಯ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಹಾಜರಾತಿ ಪುಸ್ತಕದಲ್ಲಿಯೂ ಸಹಿ ಮಾಡಿದ್ದರು. ಸಂದರ್ಶನಕ್ಕೆ ಹಾಜರಾಗದಿದ್ದರೂ ಅವರು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

ಇನ್ನು ಕೆಲವು ಸಹಾಯಕ ಪ್ರಾಧ್ಯಾಪಕರಿಗೆ ನಿಯಮ ಬಾಹಿರವಾಗಿ ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. 2007ರ ಮಾರ್ಚ್ 15 ಮತ್ತು 16ರಂದು ನೇರ ಸಂದರ್ಶನ ನಡೆಸಿದಾಗ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 64 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಇವರಲ್ಲಿ 47 ಮಂದಿಗೆ 3 ವರ್ಷದ ಬೋಧನಾ ಅನುಭವ ಇಲ್ಲ ಎಂದು ಅನರ್ಹಗೊಳಿಸಲಾಗಿದೆ. ಆದರೆ 3 ಅಭ್ಯರ್ಥಿಗಳನ್ನು ಅನುಭವ ಇಲ್ಲದಿದ್ದರೂ ಉಪನ್ಯಾಸಕ ಹುದ್ದೆಗೆ ಎಂದು ಪರಿಗಣಿಸಿ ಸಂದರ್ಶನದ ಅಂಕಗಳನ್ನೂ ನೀಡದೆ ಅವರನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.

ನಿಗದಿತ ವಯೋಮಿತಿ ಮೀರಿದ ಅಭ್ಯರ್ಥಿಗಳನ್ನೂ ನೇಮಕಾತಿ ಮಾಡಿಕೊಳ್ಳಲಾಗಿದೆ. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿ ಮೈಕ್ರೊಬಯಾಲಜಿಯ ಡಾ.ದೀಪಾ ಅವರನ್ನು ಕೈಬಿಟ್ಟು ಆಯ್ಕೆಯಾಗದ ಅಭ್ಯರ್ಥಿ ಡಾ.ಮೈತ್ರಿ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿದ್ದರೂ ನಿವೃತ್ತರನ್ನು ಕೆಲವು ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ನಿವೃತ್ತರಾದ ಡಾ.ಎಸ್.ಪಿ.ಯೋಗಣ್ಣ ಅವರನ್ನು ಸೀನಿಯರ್ ರೆಸಿಡೆಂಟ್ ಲಯಸನ್ ಅಧಿಕಾರಿ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಲಯಸನ್ ಅಧಿಕಾರಿ ಹುದ್ದೆಗೆ ಸರ್ಕಾರದ ಅನುಮತಿ ಇಲ್ಲ. ವೈದ್ಯಕೀಯ ದಾಖಲಾತಿ ವಿಭಾಗಕ್ಕೆ ಶ್ಯಾಮಸುಂದರ್ ಎಂಬ ನಿವೃತ್ತರನ್ನು ನೇಮಕ ಮಾಡಲಾಗಿದೆ.

ಮೊದಲನೆ ನೇರ ನೇಮಕಾತಿ ಸಂದರ್ಶನ ಕಾಲದಲ್ಲಿ ಸೇವಾ ನಿರತ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ ಎಂದು ನಿರ್ಬಂಧಿಸಲಾಗಿದೆ. ಪ್ರೊಫೆಸರ್ ಹುದ್ದೆ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗೆ ಸಹಾಯಕ ಪ್ರೊಫೆಸರ್ ಹುದ್ದೆ ನೀಡಲಾಗಿದೆ. ಉಪನ್ಯಾಸಕ ಹುದ್ದೆ ಸಂದರ್ಶನಕ್ಕೆ ಬಂದವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಲಾಗಿದೆ. ಹುದ್ದೆಗೆ ನೇಮಕಗೊಂಡು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳನ್ನು ಒಂದು ವರ್ಷ ಬಿಟ್ಟು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಇನ್ನೂ ತಮಾಷೆ ಎಂದರೆ ನೇಮಕಾತಿ ಪ್ರಕಟಣೆ ನೀಡಿದ ಸಂಖ್ಯೆಯ ಹುದ್ದೆಗಳಿಗಿಂತ ಹೆಚ್ಚು ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೆಥಾಲಜಿ ವಿಭಾಗದಲ್ಲಿ 2 ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂದರ್ಶನಕ್ಕೆ ಕರೆದಿದ್ದರೆ ಮೂರು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅದೇ ರೀತಿ ಒಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದರೆ 3 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ ಬೋಧಕ ಹುದ್ದೆಗಳ ನೇಮಕದಲ್ಲಿಯೂ ಸಾಕಷ್ಟು ಅಕ್ರಮಗಳು ನಡೆದಿದ್ದು ಈಗಾಗಲೇ ಸರ್ಕಾರ ಬೋಧಕೇತರ ಹುದ್ದೆಗಳ ನೇಮಕ ರದ್ದು ಮಾಡಿದಂತೆ ಈ ಎಲ್ಲ ಬೋಧಕ ಹುದ್ದೆಗಳ ನೇಮಕಗಳನ್ನು ರದ್ದು ಮಾಡಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತೆ ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಮತ್ತು ಅಧಿಕಾರಿಗಳ ಪರಿಷತ್‌ನ ಅಧ್ಯಕ್ಷ ಶಾಂತರಾಜು ಮತ್ತು ಕಾರ್ಯದರ್ಶಿ ಚಿಕ್ಕಂದಾನಿ ಗೋಷ್ಠಿಯಲ್ಲಿ ಒತ್ತಾಯಿಸಿದರು

No comments:

Post a Comment