ಅಧಿಕಾರಿಗಳ ಸಮಗ್ರ ಮಾಹಿತಿ ಸಂಗ್ರಹಕ್ಕೆ ವಿಶೇಷ ಆಯುಕ್ತರ ಸಮಿತಿ
ಬಿಬಿಎಂಪಿ ಆಡಳಿತಕ್ಕೆ 'ಮೇಜರ್ ಸರ್ಜರಿ'
ಎಂ. ಕೀರ್ತಿಪ್ರಸಾದ್ / ಪ್ರಜಾವಾಣಿ ವಾರ್ತೆ (sept 18)
ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅಗತ್ಯಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳನ್ನು ಪತ್ತೆ ಹಚ್ಚಿ ಮಾತೃ ಇಲಾಖೆಗೆ ವಾಪಸ್ ಕಳಿಸಲು ಆಯುಕ್ತ ಸಿದ್ದಯ್ಯ ಮುಂದಾಗಿದ್ದಾರೆ.
ಎಂಜಿನಿಯರ್‌ಗಳ ವಿವರ
ಮಂಜೂರಾದ ಒಟ್ಟು ಹುದ್ದೆಗಳು 869
ಬಿಬಿಎಂಪಿಗೆ ನೇಮಕವಾದ
ಎಂಜಿನಿಯರ್‌ಗಳು 255
ಎರವಲು ಸೇವೆ ಮೇಲೆ
ನಿಯೋಜಿತ ಎಂಜಿನಿಯರ್‌ಗಳು 542
ಎರವಲು ಸೇವೆ ಸಲ್ಲಿಸುತ್ತಿರುವ
ಸಹಾಯಕ/ಕಿರಿಯಎಂಜಿನಿಯರ್ 294
ಎರವಲು ಸೇವೆಯ ಮೇಲೆ
ನಿಯೋಜನೆಗೊಂಡ ಎಇಇಗಳು 202
ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅಗತ್ಯಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳನ್ನು ಪತ್ತೆ ಹಚ್ಚಿ ಮಾತೃ ಇಲಾಖೆಗೆ ವಾಪಸ್ ಕಳಿಸಲು ಆಯುಕ್ತ ಸಿದ್ದಯ್ಯ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಆಡಳಿತದಲ್ಲಿ 'ಮೇಜರ್ ಸರ್ಜರಿ' ಮಾಡಲು ಸಜ್ಜಾಗಿದ್ದಾರೆ.
ಬಿಬಿಎಂಪಿ ಹಲವು ಅಧಿಕಾರಿಗಳ ಪಾಲಿಗೆ 'ಕಾಮಧೇನು'! ಹಾಗಾಗಿ ಇಲ್ಲಿ ಕಾರ್ಯ ನಿರ್ವಹಿಸಲು ಹಲವು ಇಲಾಖೆಗಳ ಅಧಿಕಾರಿಗಳು ಎಲ್ಲಿಲ್ಲದ ಉತ್ಸಾಹ ತೋರುತ್ತಾರೆ. ಅದರಲ್ಲೂ ಬಹುಪಾಲು ಮಂದಿ ಅಧಿಕಾರಿಗಳು ಎಂಜಿನಿಯರಿಂಗ್ ವಿಭಾಗದ ಮೇಲೆ ಕಣ್ಣಿಟ್ಟಿರುತ್ತಾರೆ.
ಇದಕ್ಕಾಗಿ ಭಾರಿ ರಾಜಕೀಯ ಒತ್ತಡ ತಂದು ಜಾಗ ಗಿಟ್ಟಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಪಾಲಿಕೆಯ ಕಾಯಂ ನೌಕರರಾಗಿರುವ ಎಂಜಿನಿಯರ್‌ಗಳ ದುಪ್ಪಟ್ಟು ಸಂಖ್ಯೆಯಷ್ಟು ಎಂಜಿನಿಯರ್‌ಗಳು ಇತರೆ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ!
ಆಯಕಟ್ಟಿನ ಹುದ್ದೆಗಳು: ಪಾಲಿಕೆಯಲ್ಲಿ ಕಾಮಗಾರಿ ಹಾಗೂ ನಗರ ಯೋಜನೆ ವಿಭಾಗಗಳು ಆಯಕಟ್ಟಿನ ಜಾಗಗಳು. ಕಾಮಗಾರಿ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳು ನಡೆಯುತ್ತವೆ. ಲಕ್ಷ- ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳ ನಿರ್ಮಾಣಕ್ಕೆ ನಗರ ಯೋಜನೆ ವಿಭಾಗ ಅನುಮತಿ ನೀಡಬೇಕಾಗುತ್ತದೆ. ಹಾಗಾಗಿ ಎರವಲು ಸೇವೆಯ ಮೇಲೆ ನಿಯೋಜನೆ ಗೊಳ್ಳುವವರು ಈ ಹುದ್ದೆ ಗಳನ್ನೇ ಗುರಿಯಾಗಿಸಿಕೊಂಡಿರುತ್ತಾರೆ.
ನಗರದ ವಾರ್ಡ್‌ಗಳ ಸಂಖ್ಯೆ 100ಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಮಂಜೂರಾದ 262 ಎಂಜಿನಿಯರ್ ಹುದ್ದೆಗಳಿದ್ದವು. ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ನಂತರ ಮಂಜೂರಾದ 240 ಹುದ್ದೆಗಳನ್ನು ಸೃಷ್ಟಿಸಲಾಯಿತು. 2008ರ ಜುಲೈ 25ರಂದು 367 ಮಂದಿ ಎಂಜಿನಿಯರ್‌ಗಳ ಹುದ್ದೆ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದರಂತೆ ಒಟ್ಟು 869 ಎಂಜಿನಿಯರ್ ಹುದ್ದೆಗಳು ಮಂಜೂರಾಗಿವೆ.
ಆದರೆ ಪಾಲಿಕೆಗೆ ನೇರವಾಗಿ ಆಯ್ಕೆಯಾದ 255 ಮಂದಿ ಎಂಜಿನಿಯರ್‌ಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಅಂದರೆ 542 ಮಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. 294 ಮಂದಿ ಸಹಾಯಕ/ ಕಿರಿಯ ಎಂಜಿನಿಯರ್‌ಗಳು ಎರವಲು ಸೇವೆಯ ಮೇಲೆ ಕೆಲಸ ಮಾಡುತ್ತಿದ್ದಾರೆ.
ಈ 542 ಮಂದಿ ಎಂಜಿನಿಯರ್‌ಗಳು ಕರ್ತವ್ಯದಲ್ಲಿ ಲೋಪ ಎಸಗಿದರೂ ಅವರ ವಿರುದ್ಧ ಕ್ರಮ ಜರುಗಿಸಲು ಬಿಬಿಎಂಪಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಎರವಲು ಸೇವೆಯ ಮೇಲೆ ನಿಯೋಜನೆಗೊಂಡ ಸಹಾಯಕ ಎಂಜಿನಿಯರ್‌ಗೆ ನೀಡುವ ಸಂಬಳದ ಹಣದಲ್ಲಿ ಪಾಲಿಕೆಯ ಇಬ್ಬರು ಸಹಾಯಕ ಎಂಜಿನಿಯರ್‌ಗಳಿಗೆ ವೇತನ ನೀಡಬಹುದು ಎಂದು ಪಾಲಿಕೆ ಅಧಿಕಾರಿಗಳೇ ಹೇಳುತ್ತಾರೆ.
ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ನೌಕರರ ಕುರಿತು ಸಮೀಕ್ಷೆ ನಡೆಸಲು ಆಯುಕ್ತರು ನಿರ್ಧರಿಸಿದ್ದಾರೆ. ಬಿಬಿಎಂಪಿಗೆ ಎಷ್ಟು ಸಿಬ್ಬಂದಿ- ಅಧಿಕಾರಿಗಳ ಅಗತ್ಯವಿದೆ, ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ- ಅಧಿಕಾರಿಗಳ ವಿವರ, ಅವರ ಕಾರ್ಯಕ್ಷಮತೆ ಇತರೆ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆಯುವ ಉದ್ದೇಶದಿಂದ ವಿಶೇಷ ಆಯುಕ್ತ ನಿರಂಜನ್ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ.
ಎಂಜಿನಿಯರಿಂಗ್ ಚೀಫ್ ಎ.ಕೆ. ಗೋಪಾಲಸ್ವಾಮಿ, ಉಪ ಆಯುಕ್ತ (ಆಡಳಿತ) ಮಂಜುನಾಥ್ ಕೂಡ ಸಮಿತಿಯಲ್ಲಿದ್ದಾರೆ.
ಕೆಲಸ ಹಂಚಿಕೆ ಏರುಪೇರು: 'ಬಿಬಿಎಂಪಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೇ ಎರವಲು ಸೇವೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಇದೆ. ಹಾಗಾಗಿ ಪಾಲಿಕೆಯಲ್ಲಿರುವ ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಗೂ ಅವರ ಜವಾಬ್ದಾರಿಗಳ ಕುರಿತು ಸಮಗ್ರ ವಿವರ ಸಂಗ್ರಹಿಸಲು ವಿಶೇಷ ಆಯುಕ್ತರ ನೇತೃತ್ವದ ಸಮಿತಿಗೆ ಸೂಚಿಸಲಾಗಿದೆ' ಎಂದು ಆಯುಕ್ತ ಸಿದ್ದಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.
'ಹಲವು ವಿಭಾಗಗಳಲ್ಲಿ ಕೆಲಸದ ಹಂಚಿಕೆ ಸಮ ಪ್ರಮಾಣದಲ್ಲಿ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಕೆಲವು ವಲಯಗಳಲ್ಲಿ ಡ್ರಾಫ್ಟ್ ಮನ್‌ಗಳಿಗೆ (ಸಹಾಯಕ ಎಂಜಿನಿಯರ್) ಕೆಲಸವೇ ಇಲ್ಲದಿರುವುದು ಕಂಡುಬಂದಿದೆ. ತಿಂಗಳಿಗೆ ಒಂದೆರಡು ಕಡತಗಳ ಪರಿಶೀಲನೆ ಹೊರತು ಪಡಿಸಿ ಉಳಿದಂತೆ ಯಾವುದೇ ಜವಾಬ್ದಾರಿ ನೀಡಿಲ್ಲ. ಇಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು' ಎಂದರು.
'ಇತ್ತೀಚೆಗಷ್ಟೇ 119 ಮಂದಿ ಪರಿಸರ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಎರಡು ವಾರ್ಡ್‌ಗಳಿಗೆ ಒಬ್ಬ ಪರಿಸರ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಇವರು ತ್ಯಾಜ್ಯ ಸಂಗ್ರಹಣೆ- ಸಾಗಣೆ ಕಾರ್ಯದ ಮೇಲ್ವಿಚಾರಣೆ ನಡೆಸಲಿದ್ದಾರೆ. ಬೆಳಿಗ್ಗೆ 11ರ ನಂತರ ಇವರಿಗೆ ಯಾವುದೇ ಕೆಲಸವಿರುವುದಿಲ್ಲ. ಇವರನ್ನು ಬೇರೆ ಕೆಲಸಗಳಿಗೆ ನಿಯೋಜಿಸುವತ್ತ ಚಿಂತನೆ ನಡೆದಿದೆ' ಎಂದು ವಿವರಿಸಿದರು.
ವಾರದ ಗಡುವು: 'ಪಾಲಿಕೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಗ್ರ ವಿವರವನ್ನು ವಾರದೊಳಗೆ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಮಾಹಿತಿ ಕೈಸೇರಿದ ಬಳಿಕ ಬದಲಾವಣೆ ಮಾಡಲಾಗುವುದು' ಎಂದರು.