ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪಲಕ ಹೊತ್ತ ಭವ್ಯ ಕಟ್ಟಡವನ್ನು ಜನಸಾಮಾನ್ಯರು ಬಹಳ ಭಕ್ತಿಭಾವದಿಂದ ಕಾಣುತ್ತಾರೆ. ಅದರ ಗರ್ಭಗುಡಿಯಲ್ಲಿ ಮೂವರು ಶಾಸಕರು ನಡೆಸಿದ ಅನಾಚಾರ ದೃಶ್ಯಮಾಧ್ಯಮದಲ್ಲಿ ಬಯಲಾದ ಬೆನ್ನಿಗೇ ವಿಧಾನಸೌಧದೊಳಗಿರುವ ಆಡಳಿತ ಯಂತ್ರ ಎಷ್ಟು ಶಿಥಿಲವಾಗಿದೆ ಎಂಬುದನ್ನು ಉದಾಹರಣೆ ಸಹಿತ ದಿ ೧೬-೨೨೦೧೨ ರಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಿರುವ ಲೇಖನದ ಮೂಲಕ ವಿಜಯಕರ್ನಾಟಕ ಪತ್ರಿಕೆಯು ನಾಡಿನ ಜನರ ಮುಂದಿಟ್ಟಿದೆ.
ಈ ಶಿಥಿಲ ವ್ಯವಸ್ಥೆಯೊಳಗೆ ಒಂದು ರೀತಿಯ ಪಾಳೆಗಾರಿಕೆಯಂತಹಾ ಆಡಳಿತ ಶೈಲಿ ರೂಪುಗೊಳ್ಳುತ್ತಿದೆ.. ಲೇಖನದಲ್ಲಿ ಹೇಳಿರುವಂತೆ ವರ್ಗಾವಣೆ ನೀತಿಯಲ್ಲಿರುವ ಕೊರತೆಯಿಂದಾಗಿ ಇಲ್ಲಿ ಒಂದು ರೀತಿಯ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಯಾಗುತ್ತಿದೆ. ಇಲ್ಲಿ ಯಾರಾದರೂ ನೌಕರ ಒಂದು ಲಾಭದಾಯಕ ಎನ್ನುವ ಹುದ್ದೆಯನ್ನ ಭದ್ರವಾಗಿ ಹಿಡಿದುಕೊಂಡರೆ ಆ ‘ಪಟ್ಟ’ವನ್ನು ಆತ ಬಿಟ್ಟುಕೊಡುವ ಅಗತ್ಯವೇ ಇಲ್ಲ. ಆತ ನಿವೃತ್ತಿಯಾಗುವವರೆಗೆ ಅಥವಾ ಇನ್ಯಾರೋ ಆ ಹುದ್ದೆಯನ್ನು ಖರೀದಿಸುವವರೆಗೆ ಆ ಹುದ್ದೆ ಅವನ ಆಧೀನದಲ್ಲೇ ಉಳಿಯುತ್ತದೆ. ಆತನಿಗೆ ಬಡ್ತಿ ಇಲ್ಲವೋ ಎಂದು ನೀವು ಕೇಳಬಹುದು. ಈ ಬಡ್ತಿಯ ಸೌಲಭ್ಯಗಳನ್ನೂ ಪಡೆದು ಅದರೊಂದಿಗೆ ಹಳೆಯ ಹುದ್ದೆಯನ್ನುನ್ನೂ ಉಳಿಸಿಕೊಂಡಿರುವ ಧೋರ್ತರು ಕೂಡ ಇಲ್ಲಿದ್ದಾರೆ. You can’t have the cake and eat it too “ಎಂಬ ನಾಣ್ನುಡಿಯನ್ನು ಸಹಾ ಸುಳ್ಳುಮಾಡಿರುವ ಮಹಾತ್ಮರು ಸಚಿವಾಲಯದಲ್ಲಲದೆ ಇನ್ನೆಲ್ಲೂ ನಿಮಗೆ ಸಿಗಲಾರರು. ಅದಕ್ಕೆ ಪೂರಕವಾದ ನಿಯಮಾವಳಿಗಳನ್ನುಸಹಾ ಇಲ್ಲಿನ ಪಟ್ಟಭದ್ರರು ರೂಪಿಸಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು “upgradation” ಎಂಬ ವಾಮಮಾರ್ಗ. ತನ್ನ ಕುರ್ಚಿಗೆ ಅಂಟಿಕೊಂಡೇ ಮೇಲೆಮೇಲೆ ಏರುವ ವಿದ್ಯೆಯನ್ನು ರಾಜಕಾರಣಿಗಳು ಇಲ್ಲಿನ ನೌಕರರಿಂದಲೇ ಕಲಿಬಹುದಾಗಿದೆ. ಇಲ್ಲಿ ಕಿರಿಯ ಸಹಾಯಕನಾಗಿ ಅಥವ ಟೈಪಿಸ್ಟ ಆಗಿ ಸೇರಿ ಆ ಸ್ಥಳದಲ್ಲಿ ತೃಪ್ತಿಯೂ ಅಥವಾ ಇನ್ನೇನೋ ಇದೆ ಎಂದು ಒಬ್ಬ ನೌಕರ ಅಂದು ಕೊಂಡರೆ ಅದೇ ಜಾಗದಲ್ಲಿ ಆಪ್ ಗ್ರೇಡ್ ಆಗಿ ಅಲ್ಲೇ ಸ್ಟೆನೋ ಮತ್ತು ಹಿರಿಯ ಸಹಾಯಕ ಆಗಬಹುದು. ಕೊನೆಗೆ ಇನ್ನೂ ಬಡ್ತಿ ಸಿಕ್ಕಿದರೆ ಅದೇ ಶಾಖೆಗೆ ಶಾಖಾಧಿಕಾರಿ ಆಗಿ ನಂತರ ಅಲ್ಲೇ ಅಧೀನ ಕಾರ್ಯದರ್ಶಿ ಕೂಡ ಆಗಬಹುದು. ೨೦೦೧ರ ವರ್ಗಾವಣೆ ನೀತಿಯಲ್ಲಿ ರಾಜ್ಯ ಸರ್ಕಾರದ ಇತರ ಎಲ್ಲಾ ನೌಕರರಿಗೆ ಕಟ್ಟುನಿಟ್ಟಿನ ನಿಯಮರೂಪಿಸಲಾಗಿದೆಯಾದರೂ ಸಚಿವಾಲಯದ ನೌಕರರಿಗೆ ಸಂಬಂದಿಸಿದಂತೆ ಕೇವಲ ಮಾರ್ಗಸೂಚಿಯನ್ನು ಮಾತ್ರಾ ನೀಡಲಾಗಿದೆ. ಅಂದರೆ, ವರ್ಗಾವಣೆ ನೀತಿಯಿಂದ ಸಚಿವಾಲಯದ ನೌಕರರನ್ನು ಹೊರತುಪಡಿಸಿಲಾಗಿದೆ .ಈ ಮಾರ್ಗಸೂಚಿಯನ್ನು ಸಹಾ ಕಟ್ಟುನಿಟ್ಟಾಗಿ ಪಾಲಿಸುವ ಸತ್ಸಂಪ್ರದಾಯವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಂದಿಲ್ಲ.ನಿಜವಾಗಿ ನೋಡಿದರೆ ವರ್ಗಾವಣೆ ನೀತಿಯಿಂದ ತೊಂದರೆಗೊಳಗಾಗುವವರು ಗಂಟುಮೂಟೆ ಕಟ್ಟಿಕೊಂಡು ಊರೂರು ಅಲೆಯುವ ಕ್ಷೇತ್ರ ಇಲಾಖೆಯ ನೌಕರರು. ಇವರುಗಳನ್ನು ಒಂದೇ ಊರಲ್ಲಿ ನೆಮ್ಮದಿಯಾಗಿ ಇರಗೊಡದ ಸರ್ಕಾರದ ವರ್ಗಾವಣೆ ನೀತಿ ಅಯೋಗ್ಯರಿಗೆ ಸಂಪಾಗಿ ಇರಲು ಅನುಕೂಲ ಕಲ್ಪಿಸಿರುವುದು ವಿಪರ್ಯಾಸವೇ ಸರಿ.
ದೀಪದ ಕೆಳಗೆ ಕತ್ತಲು ಎಂಬ ಸತ್ಯ ತಿಳಿದಿರುವ ಕೆಲವು ಕ್ಷೇತ್ರ ಇಲಾಖೆಯ ಪ್ರಭಾವಿ ನೌಕರರು ಇಲ್ಲಿಗೆ ಡೆಪ್ಯುಟೇಶನ್ ಎಂಬ ಇನ್ನೊಂದು ವಾಮಮಾರ್ಗದಲ್ಲಿ ಬಂದು ಹತ್ತಾರು ವರ್ಷಗಳಿಂದ ತಳ ಊರಿದ್ದಾರೆ.ಮುಖ್ಯಮಂತ್ರಿಯವರ ಕಚೇರಿಯಲ್ಲೇ ಮುನ್ನೂರು ಮಂದಿ ತಳ ಊರಿರುವ ಸುದ್ದಿ ಈಗಾಗಲೇ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿರುವುದನ್ನು ಓದುಗರು ಗಮನಿಸಿರಬಹುದು.
ಡೆಪ್ಯುಟೇಶನ್ ಸಾಧ್ಯವಿಲ್ಲಾ ಎಂದಾದಲ್ಲಿ OOD (officer on other duty) ಎಂಬ ಮಾರ್ಗದಲ್ಲಿ ಬಂದು ಇಲ್ಲಿ ಸೇರಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು ಮಂತ್ರಿಗಳ ಮತ್ತು ಅಧಿಕಾರಿಗಳ ಆತಿ ಅತೀ ಆಪ್ತರು.
ಇಲ್ಲಿ ಗಟ್ಟಿಯಾಗಿ ತಳೂರಿರುವ ನೌಕರರನ್ನು ಕಾರ್ಯದರ್ಶಿಗಳಾಗಿರುವ ಹಿರಿಯ ಐ ಎ ಎಸ್ ಅಧಿಕಾರಿಗಳು ಸಹಾ ಅಲ್ಲಾಡಿಸಲು ಸಾಧ್ಯ ಇಲ್ಲ. ಹಾಗೇನಾದರೂ ಮಾಡಿದರೆ ಮಾನ್ಯ ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಯಿಂದಲೇ ಶಿಫಾರಸ್ಸು ಪಡೆದು ಮತ್ತೆ ಅದೇ ಸ್ಥಳಕ್ಕೆ ಬಂದು ಕುಳಿತುಕೊಳ್ಳುವ ಚತುರರಿದ್ದಾರೆ. ಕೆಸರಿಗೆ ಕಲ್ಲು ಹೊಡೆದು ಮುಖಕ್ಕೆ ಸಿಡಿಸಿಕೊಳ್ಳುವುದು ಏಕೆ ಎಂದುಕೊಂಡು ಹಿರಿಯ ಅಧಿಕಾರಿಗಳು ಸಹಾ ಇಲ್ಲಿನ ವ್ಯವಸ್ತೆಯಲ್ಲಿ ಹಸ್ತಕ್ಷೇಪ ಮಾಡಲು ಹೋಗುವುದಿಲ್ಲ.ಇದು ಸರ್ಕಾರದ ಇಂದಿನ ದುಸ್ತಿತಿ.ಈ ಸ್ತಿತಿಗೆ ಕಾರಣವಾಗಿರುವುದು ದುಷ್ಟರ ದುಷ್ಟತನವಲ್ಲ. ಒಳ್ಳೆಯವರ ನಿಷ್ಕ್ರಿಯತೆ !.
ವಿಜಯಕರ್ನಾಟಕದ ಈ ವರದಿಯಲ್ಲಿ ಕೆಲವು ತಪ್ಪುಗಳು ನುಸುಳಿದಂತಿವೆ. ಇಲ್ಲಿ ಹೆಸರಿಸಲಾಗಿರುವ ಕೆಲವು ಅಧಿಕಾರಿಗಳಲ್ಲಿ ಇತ್ತೀಚಿಗೆ ಆ ಹುದ್ದೆಗೆ ಬಂದವರು,ಹಿಂದೆಯೇ ನಿವೃತ್ತರಾಗಿ ಹೋದವರ ಹೆಸರುಗಳಿವೆ. ಹಾಗೆಂದಮಾತ್ರಕ್ಕೆ ಈ ಲೇಖನ ತಪ್ಪು ಎಂದಾಗುವುದಿಲ್ಲ. ಆದರೆ ಮಾಹಿತಿ ಕಲೆಹಾಕುವಲ್ಲಿ ಇನ್ನು ಹೆಚ್ಚಿನ ಶ್ರಮವಹಿಸಿದ್ದಾರೆ ಈ ಪ್ರಮಾದವನ್ನು ಸುಲಭವಾಗಿ ತಪ್ಪಿಸಬಹುದಿತ್ತು.
ಇನ್ನೊಂದು ತಪ್ಪು ಎಂದರೆ ಈ ಜನರ ಎತ್ತಂಗಡಿಗೆ ಮುಖ್ಯಕಾರ್ಯದರ್ಶಿಯವರ ಕಚೇರಿಯಲ್ಲಿ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಬರೆದಿರುವುದು.ಇದು ಅತ್ಯಂತ ಹಾಸ್ಯಸ್ಪದವಾಗಿದೆ. ಯಾಕೆಂದರೆ ಅಂತಹಾ ಪಟ್ಟಿಯೇನಾದರು ಪ್ರಾಮಾಣಿಕವಾಗಿ ತಯಾರಾದರೆ ಮೊದಲು ಖಾಲಿ ಆಗುವುದು ಅವರ ಕಚೇರಿಯೇ!. ಸಚಿವಾಲಯದಲ್ಲಿರುವ ಓ ಓ ಡಿ, ಡೆಪ್ಯುಟೇಶನ್, ಅಪ್ ಗ್ರೆಡೆಶನ್ ಮುಂತಾದ ಎಲ್ಲಾ ನ್ಯೂನ್ಯತೆಗಳನ್ನು ಮುಖ್ಯಕಾರ್ಯದರ್ಶಿಯ ಕಚೇರಿ ಪ್ರತಿಪಲಿಸುವಂತಿದೆ.
ಇನ್ನು, ಸಚಿವಾಲಯಕ್ಕೆ ಒಂದು ವರ್ಗಾವಣೆ ನೀತಿಯೇ ಇಲ್ಲ ಎಂದಾದರೆ ಇಲ್ಲಿ ಟ್ರಾನ್ಸ್ಫರ್ಗಳು ಹೇಗೆ ನಡೆಯುತ್ತವೆ ಎಂಬ ಕುತೂಹಲ ನಿಮ್ಮನ್ನು ಕಾಡಬಹುದು.ವರ್ಗಾವಣೆಗೆ ರೀತಿ,ನೀತಿ ಏನೂ ಇಲ್ಲದ ಜಾಗದಲ್ಲಿಯೂ ಸಹಾ ಕೆಲವರು ಮರದಿಂದ ಮರಕ್ಕೆ ಜಿಗಿಯುವ ಮಂಗನಷ್ಟೇ ಸಲೀಸಾಗಿ ಇಲಾಖೆಯಿಂದ ಇಲಾಖೆಗೆ ಜಿಗಿಯುತ್ತಾರೆ .ಇದು ಹೇಗೆ ಗೊತ್ತೇ?
ವರ್ಗಾವಣೆ ಬಯಸುವವರು ಮೊದಲು ಯಾರಾದರೂ ಜನಪ್ರತಿನಿಧಿಯಿಂದ ಮುಖ್ಯಮಂತ್ರಿಯವರಿಗೆ ಒಂದು ಶಿಫಾರಸ್ಸು ಪತ್ರ ಕಳುಹಿಸಬೇಕು ನಂತರ ಮುಖ್ಯಮಂತ್ರಿ ಕಚೇರಿಯಲ್ಲಿ ಯಾರನ್ನಾದರೂ ಹಿಡಿದು ಸಿ ಎಂ ರ ಸಹಿಹಾಕಿಸಬೇಕು. ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಅದನ್ನು ಸಿ ಆ ಸು ಇಲಾಖೆ . ಯಲ್ಲಿ ಫಾಲ್ಲೋಆಪ್ ಮಾಡಿ ಸಂಬಂದಿಸಿದವರ ಕೈ ಬೆಚ್ಚಗೆ ಮಾಡಬೇಕು. ಇದು ಇಲ್ಲಿನ ವರ್ಗಾವಣೆ ಪ್ರೊಸಿಜರ್. ಈ ನೀತಿಯನ್ನು ತಿದ್ದುಪಡಿ ಮಾಡುವ ಆಸಕ್ತಿ ಸಿ ಆ ಸು ಇಲಾಖೆಗೆ ಇಲ್ಲ. ಹಿಂದೆ ತಾರ ಅಜಯಸಿಂಹ ಎಂಬುವವರು ಸಿ ಆ ಸು ಇಲಾಖೆಯ ಕಾರ್ಯದರ್ಶಿ ಆಗಿದ್ದಾಗ ಬಹಳದಿನ ಒಂದೇ ಸೀಟಿನಲ್ಲಿ ಇದ್ದವರನ್ನು ಸಾರಸಗಟಾಗಿ ಎತ್ತಂಗಡಿಮಾಡಿದ್ದರಂತೆ . ಆಗ ಸಹಾ ಕೆಲವರು ಬಚಾವಾದರು. ಎತ್ತಂಗಡಿ ಮಾಡುವಾಗ ಈತ ಇಲಾಖೆಯಲ್ಲಿ ಎಷ್ಟು ವರ್ಷದಿಂದ ಇದ್ದಾನೆ ಎಂಬುದನ್ನು ಅವರು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆಪಗ್ರೇಡ್ ಆದವರು ನಾನು ಈ ಹುದ್ದೆಯಲ್ಲಿ ಬರಿ ಒಂದೆರಡು ವರ್ಷದಿಂದ ಇದ್ದೇನೆ ಎಂದು ಬೂಸಿಬಿಟ್ಟು ವರ್ಗಾವಣೆ ತಪ್ಪಿಸಿಕೊಂಡಿದ್ದಾರೆ.
ನೀತಿ ನಿಯಮಗಳ ಪಾಲನೆಯಲ್ಲಿ ಸಚಿವಾಲಯವು ಎಂತಹಾ ರಸತಾಳಕ್ಕೆ ಇಳಿದಿದೆ ಎಂದರೆ ಮಾಹಿತಿ ಹಕ್ಕು ಅಧಿನಿಯಮದ ಪರಿಜ್ಞಾನ ಇಲ್ಲಿನ ಹೆಚ್ಚಿನಂಶ ಅಧಿಕಾರಿಗಳಿಗೆ ಇದ್ದಂತಿಲ್ಲ. ಜನರಿಗೆ ಮಾಹಿತಿ ನೀಡುವ ವಿಚಾರದಲ್ಲಿ ವಿಧಾನಸೌದ ಎಷ್ಟು ಹಿಂದಿದೆ ಎಂದರೆ ಇಲ್ಲಿನ ಉತ್ತರ ದ್ವಾರದಲ್ಲಿ ಹಾಕಲಾಗಿರುವ ನಾಮಪಲಕದಲ್ಲಿ ಯಾವ ಯಾವ ಇಲಾಖೆ ಎಲೆಲ್ಲಿ ಬರುತ್ತದೆ ಎಂಬ ಮಾಹಿತಿಯನ್ನು ಕೂಡ ಸಂಪೂರ್ಣವಾಗಿ ಹಾಕಿಲ್ಲ. ಈ ವಿಷಯದಲ್ಲಿ ವಿಧಾನಸೌದ ತಹಶೀಲ್ದಾರರ ಕಚೇರಿಗಿಂತಲೂ ಹಿಂದಿದೆ .
ಈಗಿನ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಆದೇಶಗಳನ್ನು ವೆಬ್ ಸೈಟ್ ನಲ್ಲಿ ಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದು ಇನ್ನೂ ಕಾರ್ಯಗತಗೊಂಡಿಲ್ಲ.ಡಿಪಿಎಎಲ್ ಎಂಬ ಇಲಾಖೆಯ ವೆಬ್ಸೈಟ್ ನಲ್ಲಿ ನಿಯಮಗಳನ್ನು ಪ್ರಕಟಿಸಲಾಗುತ್ತಿದೆಯಾದರು ಇದನ್ನೂ ಸಹಾ ಕಾಲಕಾಲಕ್ಕೆ ಅಪ್ಡೇಟ್ ಮಾಡಲು ಸಾಧ್ಯ ಆಗುತ್ತಿಲ್ಲ. ಕಾರಣ ಕೇಳಿದರೆ ಇಲಾಖೆಗಳಿಂದ ಮಾಹಿತಿ ಬಂದಿಲ್ಲ ಎನ್ನುತ್ತಾರೆ. ಮಾಹಿತಿ ಹಕ್ಕು ಅಧಿನಿಯಮ 2005ರ ಕಲ೦ 4(1) (ಬಿ )ಪ್ರಕಾರ ಎಲ್ಲಾ ಕಚೇರಿಗಳು ತಮ್ಮ ಇಲಾಖೆಯ ಬಗ್ಗೆ, ಕಾರ್ಯಹಂಚಿಕೆಯ ಬಗ್ಗೆ,ಪ್ರತಿಯೊಬ್ಬ ನೌಕರನ ಕಾರ್ಯವ್ಯಾಪ್ತಿ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಬೇಕು. ಮತ್ತು ಕಾಲಕಾಲಕ್ಕೆ ಅದನ್ನು ಪರಿಷ್ಕರಿಸಬೇಕು. ಈ ವಿಷಯದಲ್ಲಿ ಆರಂಭಶೂರತ್ವ ತೋರಿಸಿದ ಸಚಿವಾಲಯ www.dpar-rti.kar.nic.in ವೆಬ್ಸೈಟ್ ಸೃಷ್ಟಿಸಿತು.ಆದರೆ ಪ್ರಸ್ತುತ ಇಲ್ಲಿ ಸಿಗುವ ಮಾಹಿತಿ ಅಪೂರ್ಣವಾಗಿದೆ ಮತ್ತು ತಪ್ಪಾಗಿದೆ. ಇದರಲ್ಲಿ ಸೊ ಕಾಲ್ಡ್ ಗ್ರೇಟ್ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಯವರ ಕಚೇರಿಗೆ ಸಂಬಂದಿಸಿದ ಮಾಹಿತಿಯೇ ಇಲ್ಲ.ಹೋಗಲಿ ಸ್ವತಃ DPAR(ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ) ಇಲಾಖೆಯ ಎಲ್ಲಾ ವಿಭಾಗಗಳ ಮಾಹಿತಿಯೇ ಇಲ್ಲ.ಇಲ್ಲಿನ ಹುಳುಕು ಮುಚ್ಚಿಕೊಳ್ಳುವ ಉದ್ದೇಶದಿಂದಲೇ ಇಲ್ಲಿ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಕೆಲವರು ಹೇಳುತ್ತಾರೆ. ಮಾಹಿತಿ ತಂತ್ರಜ್ಞಾನವನ್ನು ಆಡಳಿತದಲ್ಲಿ ಹೆಚ್ಚುಹೆಚ್ಚಾಗಿ ಬಳಸುವ ಉದ್ದೇಶದಿಂದ ಇ-ಆಡಳಿತ ಎಂಬ ಇಲಾಖೆಯನ್ನೇ ಸೃಷ್ಟಿಸಲಾಗಿದೆ. ಕ್ಷೇತ್ರ ಇಲಾಖೆಗಳಿಗೆ ಸಂಬಂದಿಸಿದಂತೆ ಭೂಮಿ,ಬೆಂಗಳೂರು ಒನ್,ಮುಂತಾದ ಯೋಜನೆಯನ್ನು ರೂಪಿಸಿದ್ದರೂ ಸಹಾ ಸಚಿವಾಲಯದೊಳಗೆ ಯಾವುದೇ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ.ಇದು ಸಚಿವಾಲಯವಾಹಿನಿ ಎಂಬ ಕಡತ ನಿರ್ವಹಣಾ ಪದ್ದತಿಯನ್ನು ಜಾರಿಗೆ ತಂದಿದ್ದರೂ ಸಚಿವಾಲಯವು ಹಳೆ ಪದ್ದತಿಯನ್ನ ಉಳಿಸಿಕೊಂಡಿದ್ದು ಅದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಸಚಿವಾಲಯ ವಾಹಿನಿಯನ್ನು ಪಾಲಿಸಲು ಶಾಖೆಗೆ ಒಂದು ಕಂಪ್ಯೂಟರ್ ಸಾಕು.ಆದರೆ ಇ ಆಡಳಿತ ಇಲ್ಲಿನ ಪ್ರತಿಯೊಂದು ಟೇಬಲ್ ಗೇ ಒಂದೊಂದು ಕಂಪ್ಯೂಟರ್ ನೀಡಿದೆ. ಇಲ್ಲಿ ಗಣಕ ಯಂತ್ರವನ್ನು ಹಳೆಯ ಬೆರಳಚ್ಚು ಯಂತ್ರಕ್ಕೆ ಪರ್ಯಾಯವಾಗಷ್ಟೇ ಬಳಸಲಾಗುತ್ತಿದೆ. ತನ್ನ ಅಧೀನದಲ್ಲಿ ಬರುವ ಗಣಕಯಂತ್ರಗಳನ್ನು ಶಾಖಾದಿಕಾರಿಗಳು ಯಾವ ರೀತಿ ಬಳಸಬೇಕು,ಅದರಲ್ಲಿ ಅವರು ಟೈಪ್ ಮಾಡುವ ದಸ್ತಾವೆಜುಗಳನ್ನು ಯಾವ ರೀತಿಯಲ್ಲಿ ಶೇಖರಿಸಿಡಬೇಕು ,ಜೋಡಿಸಬೇಕು ಎಂಬ ಬಗ್ಗೆ ಯಾವುದೇ ಮಾರ್ಗಸೂಚಿಯನ್ನು ನೀಡದ ಕಾರಣ ಇಲ್ಲಿನ ಗಣಕಯಂತ್ರಗಳು ಟೈಪಿಸ್ಟ್ /ಸ್ಟೆನೋ ಗಳು ಗೇಮ್ಸ್,ಫೋಟೋ ಮುಂತಾದವುಗಳನ್ನು ಸಂಗ್ರಹಿಸಿಡುವ ಒಂದು ಕಸದ ಬುಟ್ಟಿಯಾಗಿದೆ.ಈಗಂತೂ ಬ್ಲೂಫಿಲಂ ನೋಡುವ ಶಾಸಕರ ಪಕ್ಷ ಸರ್ಕಾರ ನಡೆಸುತ್ತಿರುವುದರಿಂದ ಈ ಯಂತ್ರಗಳಲ್ಲಿ ಬ್ಲೂ ಫಿಲಂ ಗಳ ನಿಧಿ ಕಂಡು ಬಂದರೂ ಆಚ್ಚರಿ ಇಲ್ಲ. ಇಲ್ಲಿ ಶಾಸಕರು /ನೌಕರರಾದಿಯಾಗಿ ಎಲ್ಲರೂ ‘ದೇವರ ಫಿಲಂ’ ನೋಡುತ್ತಿರುವ ದೃಶ್ಯ ಗುಂಡುರಾಯರ ಕನಸಿನಲ್ಲಿ ಬಂದಿತ್ತೋ ಏನೋ ಅದಕ್ಕೆ ಅವರು ವಿಧಾನ ಸೌದದ ಮೇಲೆ “ಸರ್ಕಾರಿ ಕೆಲಸ ದೇವರ ಕೆಲಸ”ಎಂದು ಬರೆಸಿದ್ದರು